ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರಿಗೆ ಚುನಾವಣಾ ಕಾರ್ಯದ ಜವಾಬ್ದಾರಿ ನೀಡಿರುವುದರ ಜತೆಗೆ ತರಬೇತಿಗೂ ಹಾಜರಾಗುವಂತೆ ಮೇಲಿಂದ ಮೇಲೆ ಕರೆ ಬರುತ್ತಿರುವುದು ಹಲವು ಗೊಂದಲಕ್ಕೆ ಕಾರಣವಾಗಿದೆ.
ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರವೇ ಚುನಾವಣಾ ಕೆಲಸದ ತರಬೇತಿಗಳನ್ನು ಆಯೋಜಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಗಳಲ್ಲಿ ಉಪನ್ಯಾಸಕರ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಚುನಾವಣಾಧಿಕಾರಿಗಳು ತೆಗೆದುಕೊಳ್ಳದೇ ಇರುವುದರಿಂದ ಉಪನ್ಯಾಸಕರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗದ ಉಪನ್ಯಾಸಕರನ್ನು ಪಿಆರ್‌ಒ ಮತ್ತು ಎಪಿಆರ್‌ಒಗಳಾಗಿ ನಿಯೋಜಿಸಲಾಗುತ್ತಿದೆ. ಮತದಾನ ಕೇಂದ್ರದ ಸಂಪೂರ್ಣ ಜವಾಬ್ದಾರಿ ನಿಭಾಯಿಸುವ ಇವರಿಗೆ ಚುನಾವಣೆ ಹೇಗೆ ನಡೆಸಬೇಕು ಎಂಬುದರ ತರಬೇತಿಯನ್ನು ಮಾ.31 ಅಥವಾ ಏಪ್ರಿಲ್ ಮೊದಲ ವಾರದಲ್ಲಿ ನೀಡಲಾಗುತ್ತದೆ.
ಆದರೆ, ಮೌಲ್ಯಮಾಪನ ಕಾರ್ಯದಲ್ಲಿರುವ ಬಹುತೇಕ ಉಪನ್ಯಾಸಕರು ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡಕ್ಕೆ ಹೋಗಿದ್ದಾರೆ. ಚುನಾವಣಾ ತರಬೇತಿಗಾಗಿ ವಾಪಸ್ ಜಿಲ್ಲೆಗೆ ಬರುವುದು ಕಷ್ಟ ಎಂದು ಉಪನ್ಯಾಸಕರು ನೋವು ತೋಡಿಕೊಂಡಿದ್ದಾರೆ.
ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಹೆಮ್ಮೆಯ ವಿಚಾರ. ಅದೇ ರೀತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನವೂ ಅತಿಮುಖ್ಯ. ಹೀಗಾಗಿ ಮೌಲ್ಯಮಾಪನ ಕಾರ್ಯದ ಮುಗಿದ ನಂತರ ಚುನಾವಣಾ ತರಬೇತಿ ನೀಡುವುದು ಉತ್ತಮ ಎಂದು ಹಲವು ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.