ಬೆಂಗಳೂರು: ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಆದರೆ, ಪತ್ತೆ ಕಾರ್ಯ ಮಾತ್ರ ನಿರೀಕ್ಷಿತ ಮಟ್ಟ ತಲುಪುತ್ತಿಲ್ಲ. ಕಾರಣ ಸೈಬರ್ ಪೊಲೀಸರಲ್ಲಿನ ಸೈಬರ್ ನೈಪುಣ್ಯತೆ ಕೊರತೆ ಅಥವಾ ತಾಂತ್ರಿಕ ಸಮಸ್ಯೆ. ಈ ಹಿನ್ನೆಲೆಯಲ್ಲಿ ನಗರದ ಎಂಟು ಸೈಬರ್, ಎಕಾನಾಮಿಕ್ಸ್, ನಾರ್ಕೋಟಿಕ್ಸ್ (ಸಿಇಎನ್) ಠಾಣೆ ಮತ್ತು ಸೈಬರ್ ಕ್ರೈಂ ಠಾಣೆಯ ಅಧಿಕಾರಿ-ಸಿಬ್ಬಂದಿಗೆ “ಸೈಬರ್ ಕ್ರೈಂ ತರಬೇತಿ’ ಆರಂಭಿಸಲಾಗಿದೆ.
ಸಿಐಡಿಯಲ್ಲಿ ಸೈಬರ್ ಅಪರಾಧಗಳ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ(ಸಿಸಿಐಟಿಆರ್) ದಲ್ಲಿ ಕಾನ್‌ಸ್ಟೇಬಲ್‌ನಿಂದ ಇನ್‌ಸ್ಪೆಕ್ಟರ್ ವರೆಗಿನ ಎಲ್ಲ ಹಂತದ ಅಧಿಕಾರಿ-ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ತರಬೇತಿ ನೀಡುತ್ತಿದ್ದಾರೆ.
30 ಮಂದಿ ತಂಡ ಪ್ರತಿ ವಾರ ತರಬೇತಿ ಪಡೆಯುತ್ತಿದ್ದು, ಈಗಾಗಲೇ ಮೂರು ಬ್ಯಾಚ್ ಮುಕ್ತಾಯಗೊಂಡಿದೆ. ಪ್ರತಿ ವಾರ 1 ಅಥವಾ ಎರಡು ವಂಚನೆ ಮಾದರಿಯನ್ನು ವಿಷಯವನ್ನಾಗಿಸಿಕೊಂಡು ತರಬೇತಿ ನೀಡಲಾಗುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ರಮಣಗುಪ್ತ ಸೂಚನೆ ಮೇರೆಗೆ ನಗರದಲ್ಲಿರುವ 8 ಸೆನ್ ಮತ್ತು 1 ಸೈಬರ್ ಠಾಣೆಯ ಸಿಬ್ಬಂದಿ ತರಬೇತಿ ಪಡೆಯುತ್ತಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಏನೆಲ್ಲ ತರಬೇತಿ ? ಸೈಬರ್ ಕ್ರೈಂ ದೂರು ಸ್ವೀಕರಿಸುವಾಗಲೇ ಕೆಲವೊಂದು ನಿರ್ದಿಷ್ಟ ಮಾಹಿತಿ ಸಂಗ್ರಹಿಸಿಕೊಂಡರೆ ಪ್ರಕರಣ ಪತ್ತೆ ಕಾರ್ಯ ಸುಲಭ. ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳುವುದು ಹೇಗೆ? ಅಗತ್ಯ ಕಂಪ್ಯೂಟರ್, ಮೊಬೈಲ್ ಹೇಗೆ ಜಪ್ತಿ ಮಾಡಬೇಕು. ನಂತರ ಅವುಗಳ ವಿಶ್ಲೇಷಣೆ ಹೇಗೆ? ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹೇಗೆ ಕಳುಹಿಸಬೇಕು? ಯಾವ ರೀತಿ ಪ್ರಶ್ನೆ ಕೇಳಬೇಕು? 5 ದಿನಗಳ ಕಾಲ ವಿಷಯಾಧಾರಿತ ತರಬೇತಿ ನೀಡಲಾಗುತ್ತದೆ. 6ನೇ ದಿನ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ಅದರಿಂದ ತರಬೇತಿ ಪಡೆದ ಸಿಬ್ಬಂದಿಯಲ್ಲೂ ಆತ್ಮವಿಶ್ವಾಸ ಮೂಡುತ್ತದೆ. ಜತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ಬ್ಯಾಂಕಿಂಗ್ ವಂಚನೆ, ಒಟಿಪಿ, ವಿತ್ ಔಟ್ ಓಟಿಪಿ ವಂಚನೆ, ಕ್ರೆಡಿಟ್ ಕಾರ್ಡ್, ಮ್ಯಾಟ್ರಿ ಮೋನಿಯಲ್, ಆ್ಯಪ್ ಮೂಲಕ ವಂಚನೆ, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟ್ರಾಗ್ರಾಂ ಮೂಲಕ ವಂಚನೆಯಾದರೆ ಹೇಗೆ ಪತ್ತೆ ಹಚ್ಚಬೇಕು. ಹೀಗೆ ಎಲ್ಲ ಮಾದರಿಯ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಯಾರೆಲ್ಲ ತರಬೇತಿ ಕೊಡುತ್ತಾರೆ ? ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸುಬ್ರಹ್ಮೇಶ್ವರ್ ರಾವ್ (ಅಡ್ವಾನ್ಸ್ ಬ್ಯಾಂಕಿಂಗ್ ವಂಚನೆ), ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತ (ಮನಿ ಲಾಡ್ರಿಂಗ್), ಸಿಐಡಿ ಸೈಬರ್ ಡಿವೈಎಸ್ಪಿಗಳಾದ, ಶರತ್, ಯಶವಂತ್ (ತನಿಖಾ ಹಂತ, ಒಟಿಪಿ, ನಾನ್ ಒಟಿಪಿ ವಂಚನೆ ಹಾಗೂ ಇತರೆ) ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ನಿರ್ದೇಶಕ ವೆಂಕಟೇಶ್ ಮೂರ್ತಿ (ಕಂಪ್ಯೂಟರ್, ಮೊಬೈಲ್, ಎಲೆಕ್ಟ್ರಾ ನಿಕ್ ವಸ್ತುಗಳ ಜಪ್ತಿ) ಕುರಿತು ತರಬೇತಿ ನೀಡುತ್ತಾರೆ. ಉತ್ತಮ ಬೆಳವಣಿಗೆ ಸೈಬರ್ ಕ್ರೈಂ ವಂಚನೆ ಬಗ್ಗೆ ಪೊಲೀಸರಿಗೆ ತರಬೇತಿ ಕೊಡುತ್ತಿರುವುದು ಉತ್ತಮ ಬೆಳವಣಿಗೆ. ಕೆಲವೊಂದು ಕ್ಸಿಷ್ಟಕರ ಪ್ರಕರಣಗಳನ್ನು ಬೇಧಿಸಲು ಇದು ಸಹಾಯವಾಗುತ್ತದೆ. ಈಗಾಗಲೇ ಎರಡು ಬಾರಿ ತರಬೇತಿ ಪಡೆದುಕೊಂಡಿದ್ದೇನೆ. ಅದರಿಂದ ಕೆಲ ಕಠಿಣ ಪ್ರಕರಣಗಳನ್ನು ಬೇಧಿಸಿದ್ದೇನೆ ಎಂದು ಸೆನ್ ಠಾಣೆ ಸಿಬ್ಬಂದಿಯೊಬ್ಬರು ಸಂತಸ ವ್ಯಕ್ತಪಡಿಸಿದರು.