ಬೆಂಗಳೂರು: ಮಲೇಷಿಯಾ ಮೂಲದ ಕಂಪನಿಯಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ ಒಂದೇ ದಿನದಲ್ಲಿ 3.5 ಕೋಟಿ ರೂ. ನೀಡುವುದಾಗಿ ವಂಚಿಸಿದ್ದ ಇಬ್ಬರು ಬಿಇ ಪದವೀಧರರು ಹಾಗೂ ಇಬ್ಬರು ಗುತ್ತಿಗೆದಾರರು ಸೇರಿದಂತೆ 7 ಮಂದಿ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಶ್ಯಾಮ್ ಥಾಮಸ್ (59), ಜೋಶ್ ಎಂ.ಕರುವಿಲ್ಲಾ (62), ಜೆಪಿನಗರದ ಜೀನ್ ಕಮಲ್ (45), ಮುಂಬೈನ ವಿಜಯ್ ವಾಮನ್ ಚಿಪ್ಲೊಂಕರ್ (45), ಬೆಂಗಳೂರು ಹೆಣ್ಣೂರಿನ ಊರ್ವಶಿ ಗೋಸ್ವಾಮಿ (34), ಜಾಫರ್ ಸಾದೀಕ್ (39), ವಿದ್ಯಾರಣ್ಯಪುರದ ಅಮೀತ್ ಮಹೇಶ್ ಗಿಡ್ವಾನಿ (40) ಬಂಧಿತರು.
ಸುಂಕದಕಟ್ಟೆಯ ಶ್ರೀನಿವಾಸ ನಗರದ ನಿವಾಸಿ ನವೀನ್ (34) ವಂಚನೆಗೊಳಗಾದವರು. ಇನ್ನು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ದೆಹಲಿ, ಗುಜರಾತ್ ಹಾಗೂ ಮಧ್ಯಪ್ರದೇಶ ಮೂಲದ ಐವರಿಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳಿಂದ 44 ಲಕ್ಷ ರೂ. ನಗದು, ನೋಟು ಎಣಿಕೆ ಯಂತ್ರ ಹಾಗೂ 5 ಮೊಬೈಲ್ ಜಪ್ತಿ ಮಾಡಲಾಗಿದೆ.
ಪ್ರಕರಣದ ವಿವರ: ನವೀನ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು ಮಲೇಷಿಯಾ ಮೂಲದ ಎಂಇಡಿಬಿ ಕ್ಯಾಪಿಟಲ್ ಬೇರ್ ಹೆಡ್ ಎಂಬ ಖಾಸಗಿ ಕಂಪನಿಯಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ, ಆ ಕಂಪನಿಯಿಂದ 3.50 ಕೋಟಿ ರೂ.ನಷ್ಟು ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ ಮೂಲಕ ಒಂದೇ ದಿನದಲ್ಲಿ ಲಾಭ ನೀಡುವ ಎಂಬುದಾಗಿ ನಂಬಿಸಿದ್ದರು. ಆರೋಪಿಗಳ ಸೂಚನೆ ಯಂತೆ ನವೀನ್ ಅವರು ಕಬ್ಬನಪೇಟೆ, 11ನೇ ಕ್ರಾಸ್‌ನಲ್ಲಿರುವ ಪಟೇಲ್ ಎಂಟರ್ ಪ್ರçಸಸ್ ಎಂಬ ಕಚೇರಿಗೆ ತೆರಳಿ ಹೂಡಿಕೆ ಮಾಡುವ ಸಲುವಾಗಿ ಮಲೇಷಿಯಾ ಮೂಲದ ಕಂಪನಿ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಗೆ 2 ಕೋಟಿ ರೂ. ನೀಡಿದ್ದರು. ಆ ಕಂಪನಿಯ ಪ್ರತಿನಿಧಿಯು ನೋಟು ಎಣಿಕೆ ಮಾಡುವ ಯಂತ್ರದಿಂದ ಹಣವನ್ನು ಎಣಿಕೆ ಮಾಡಿಕೊಂಡಿದ್ದ. ಬಳಿಕ ಬ್ಯಾಂಕ್ ಖಾತೆಗೆ ಕಂಪನಿ ವತಿಯಿಂದ 9,780 ರೂ. ವರ್ಗಾವಣೆ ಮಾಡಿ, ಉಳಿದ ಹಣ ಆದಷ್ಟು ಬೇಗ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ನವೀನ್ ಅವರನ್ನು ನಂಬಿಸಿದ್ದ. ಆ ಪ್ರತಿನಿಧಿಯು ಈ ಕಚೇರಿಯಲ್ಲಿ ಹಣ ಇಡಲು ಸುರಕ್ಷತೆ ಇಲ್ಲವಾದ್ದರಿಂದ, ಮತ್ತೂಂದು ಕಚೇರಿಯ ಲಾಕರ್‌ನಲ್ಲಿಡುವುದಾಗಿ ದೂರುದಾರರನ್ನು ನಂಬಿಸಿ ಹಣವನ್ನು ತೆಗೆದುಕೊಂಡು ಹೋಗಿದ್ದ. ನಂತರ ನವೀನ್‌ಗೆ ಯಾವುದೇ ರೀತಿಯ ಲಾಭವನ್ನಾಗಲಿ, ಹೂಡಿಕೆ ಮಾಡಿದ ಹಣವನ್ನಾಗಲಿ ವಾಪಸ್ ನೀಡದೇ ವಂಚಿಸಿದ್ದ. ವಂಚನೆಗೊಳಗಾದ ವ್ಯಕ್ತಿ ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಬ್ಬರು ಬಿ.ಇ.ಪಧವೀಧರರು: ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಇವರು ಕೊಟ್ಟ ಮಾಹಿತಿ ಆಧರಿಸಿ ಪ್ರಕರಣದ ಇತರ ಆರೋ ಪಿಗಳನ್ನು ಪೊಲೀಸರು ಬಂಧಿಸಿ ದ್ದಾರೆ. ಆರೋ ಪಿಗಳಾದ ಶ್ಯಾಮ್ ಥಾಮಸ್ ಹಾಗೂ ಜೀನ್ ಕಮಲ್ ಬಿ.ಇ ಪಧವೀ ಧರರಾಗಿದ್ದು, ಕೇರಳದಲ್ಲಿ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದರು. ಇನ್ನು ಜೋಶ್ ಬ್ರೋಕರ್ ಕೆಲಸ ಮಾಡಿಕೊಂಡಿದ್ದರೆ, ವಿಜಯ್ ವಾಮನ್ ಚಿಪ್ಲೊಂಕರ್ ಹಾಗೂ ಊರ್ವಶ್ವಿ ಗೋಸ್ವಾಮಿ ಗುತ್ತಿಗೆದಾರರಾಗಿದ್ದಾರೆ.