ಮಂಗಳೂರು/ಉಡುಪಿ: ಆಹಾರ ಉತ್ಪಾದಕರು, ಮಾರಾಟಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ “ಫಾಸ್ಟಕ್ ತರಬೇತಿ’ ಮತ್ತು ಪ್ರಮಾಣಪತ್ರ ಪಡೆಯುವುದನ್ನು ಆಹಾರ ಸಂಸ್ಕರಣ ಹಾಗೂ ಗುಣಮಟ್ಟ ಪ್ರಾಧಿಕಾರವು ಕಡ್ಡಾಯಗೊಳಿಸಲಾಗಿದೆ.
ಆಹಾರ ಸೇವೆಗಳ ಗುಣಮಟ್ಟದ ಉದ್ದೇಶಗಳನ್ನು ತಿಳಿಸಿಕೊಡಲು ಹಾಗೂ ಸ್ವಚ್ಛತಾ ಕಾಳಜಿಯ ಉತ್ತೇಜನಕಾಗಿ ಆಹಾರ ಉದ್ಯಮದ ಪ್ರತಿಯೊಬ್ಬ ವ್ಯಾಪಾರಸ್ಥರು ಈ ತರಬೇತಿಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಪ್ರಮಾಣ ಪತ್ರವನ್ನು ಪಡೆಯ ಬೇಕಾಗುತ್ತದೆ.
ಎಲ್ಲ ಆಹಾರ ವಹಿವಾಟು ಉದ್ದಿಮೆದಾರರು ತರಬೇತಿಯೊಂದಿಗೆ fssai ಪರವಾನಗಿ ಅಥವಾ ನೋಂದಣಿ ಮಾಡಿಕೊಳ್ಳಬೇಕಿದೆ. ಮಂಗಳೂರು ನಗರ ಸೇರಿದಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಆಹಾರ ಉತ್ಪಾದಕರು ಈ ನಿಯಮವನ್ನು ಪಾಲಿಸಬೇಕಾಗಿ ಆಹಾರ ಸಂಸ್ಕರಣ ಹಾಗೂ ಗುಣಮಟ್ಟ ಪ್ರಾಧಿಕಾರವು ಸೂಚಿಸಿದೆ. ಇಲ್ಲದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಸೆಕ್ಷನ್ 63 ಪ್ರಕಾರ 5 ಲಕ್ಷ ರೂ.ವರೆಗೆ ದಂಡ ಮತ್ತು 6 ತಿಂಗಳವರೆಗೆ ಶಿಕ್ಷೆ ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಲು ಕಾನೂನಿನಲ್ಲಿ ಅವಕಾಶವಿದೆ.
ಫಾಸ್ಟಕ್ ತರಬೇತಿಯನ್ನು ಎಲ್ಲ ಆಹಾರ ವಹಿವಾಟುದಾರರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು ಸರಕಾರದ ಆದೇಶದಂತೆ ಬಾಹ್ಯ ಮೂಲ ಸಂಸ್ಥೆಯಾದ ಬೆಂಗಳೂರಿನ M/S Career Crest Consultancyಗೆ ವಹಿಸಿಕೊಟ್ಟಿದ್ದು ಆನ್‌ಲೈನ್/ಆಫ್‌ಲೈನ್ ಮುಖಾಂತರ ನಿಗದಿತ ಶುಲ್ಕದೊಂದಿಗೆ ಪಾವತಿಸಿ ಸಂಸ್ಥೆ ನಿಗದಿತ ಪಡಿಸಿರುವ ದಿನದಂದು ತರಬೇತಿಯಲ್ಲಿ ಭಾಗವಹಿಸಿ ಪ್ರಮಾಣಪತ್ರ ಪಡೆಯಬೇಕಾಗಿದೆ.
ಇದನ್ನೂ ಓದಿ:ನಮ್ಮ ಕುಟುಂಬದ ತಂಟೆಗೆ ಬಂದರೆ ಹುಷಾರ್: ಬಿಜೆಪಿಗೆ ಎಚ್‌ಡಿಕೆ ಎಚ್ಚರಿಕೆ
ಯಾಕಾಗಿ ತರಬೇತಿ?
ಪರಿಶುದ್ಧ ಆಹಾರ ಪಡೆಯುವುದು, ಕಲಬೆರಕೆ ಆಹಾರ ಮಾರಾಟ ಮಾಡುವುದನ್ನು ತಡೆಗಟ್ಟುವ ಮುಖ್ಯ ಕಾರಣದಿಂದ ಕೇಂದ್ರ ಸರಕಾರ ಈ ತೀರ್ಮಾನ ಕೈಗೊಂಡಿದೆ.
ಯಾರಿಗೆ ಅನ್ವಯ?
ಹೊಟೇಲ್‌ಗಳು, ದರ್ಶನಿಗಳು, ಬೇಕರಿಗಳು, ಹಾಲಿನ ಡೈರಿ ಘಟಕಗಳು, ದಾಬಾಗಳು, ಕೂಲ್‌ಡ್ರಿಂಕ್ಸ್ ಅಂಗಡಿಗಳು, ಕಾರ್ಖಾನೆಗಳು.
ಆಹಾರ ಉತ್ಪಾದಕರು, ಮಾರಾಟಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ “ಫಾಸ್ಟಕ್ ತರಬೇತಿ’ ಮತ್ತು ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಈ ಸಂಬಂಧ ಅಂಗಡಿಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ.
-ಡಾ| ಪ್ರವೀಣ್, ಡಾ| ಪ್ರೇಮಾನಂದ್,
ಜಿಲ್ಲಾ ಅಂಕಿತಾಧಿಕಾರಿಗಳು,
ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ-ಮಂಗಳೂರು, ಉಡುಪಿ.