Advertisement

ರೈಲು ದುರಂತ ಸಂದರ್ಭ ನಾನು ತುರ್ತು ಬ್ರೇಕ್‌ ಹಾಕಿದ್ದೆ

11:33 AM Oct 22, 2018 | Team Udayavani |

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದ ಬಗ್ಗೆ ಚಾಲಕ ರವಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸುತ್ತಲೇ ಎಮರ್ಜೆನ್ಸಿ ಬ್ರೇಕ್‌ ಅನ್ನು ಒತ್ತಿದರೂ ಪ್ರಯೋಜನವಾಗಲಿಲ್ಲ. ಹಳಿಯಲ್ಲಿದ್ದ 700ಕ್ಕೂ ಅಧಿಕ ಮಂದಿಯನ್ನು ದೂರ ಸರಿಯಲು ಹಾರ್ನ್ ಕೂಡ ಮಾಡಿದ್ದೆ ಎಂದಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರ ಸುರಕ್ಷತೆಯನ್ನು ಗಮನಿಸಿ ಅಮೃತಸರ ರೈಲು ನಿಲ್ದಾಣದಲ್ಲಿಯೇ ರೈಲನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ. 

Advertisement

ಈ ನಡುವೆ 59 ಮಂದಿ ಸಾವನ್ನಪ್ಪಿದ್ದನ್ನು ಖಂಡಿಸಿ ರವಿವಾರ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ಎಸೆದದ್ದರಿಂದ ಪೊಲೀಸರು ಮತ್ತು ಭದ್ರತಾ ಸಿಬಂದಿ, ಪತ್ರಕರ್ತರಿಗೆ ಗಾಯವಾಗಿವೆ. ಇದಕ್ಕೂ ಮೊದಲು ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಠಿನ ಕ್ರಮಕ್ಕೆ ಒತ್ತಾಯಿಸಿ 300ಕ್ಕೂ ಅಧಿಕ ಮಂದಿ  ಹಳಿಗಳ ಮೇಲೆ ನಿಂತು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಬಳಿ ಮಾತುಕತೆ ನಡೆಸಿ, ಮನವೊಲಿಸಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಇದರ ಹೊರತಾಗಿಯೂ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸಂಪ್ರದಾಯ ಬೇಡ: ಇದೇ ವೇಳೆ, ದಸರಾ ಸಂದರ್ಭದಲ್ಲಿ  ರಾವಣನ ಪ್ರತಿಕೃತಿ ದಹಿಸುವ ಸಂಪ್ರದಾಯ ಕೈಬಿಡಲು ಆದೇಶ ಹೊರಡಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ಅವರಿಗೆ ಮಥುರಾದ ಶಂಕರಾಚಾರ್ಯ ಅಧೋಕ್ಷಜಾನಂದ ದೇವ ತೀರ್ಥ ಮಹಾರಾಜ ಪತ್ರ ಬರೆದಿದ್ದಾರೆ. ಇದು ಮೂಢನಂಬಿಕೆ. ಇದು ಹಿಂದೂ ಸಂಸ್ಕೃತಿಗೆ ವಿರುದ್ಧವೂ ಹೌದು. ಇದರಿಂದ ವಾಯು ಮಾಲಿನ್ಯವೂ ಉಂಟಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next