Advertisement

ಆದಾಯವನ್ನೆಲ್ಲ ನೌಕರನಿಗೆ ಒಪ್ಪಿಸಿ ಸಂಬಳ ಕೇಳುವ ಧಣಿಯ ಸ್ಥಿತಿ ಕರಾವಳಿ ರೈಲ್ವೇಯದ್ದು

12:53 AM Nov 21, 2020 | mahesh |

ಮಂಗಳೂರು: ನಿಜ ಹೇಳ ಬೇಕಾದರೆ ಕರಾವಳಿಯದ್ದು ರೈಲ್ವೇ ವಿಷಯದಲ್ಲಿ ತ್ರಿಶಂಕು ಸ್ಥಿತಿ! ಯಾಕೆ ಎಂದು ವಿವರಿಸಲು ಹಲವು ಕಾರಣಗಳಿವೆ. ಆದರೆ ಅದಕ್ಕಿಂತ ಮೊದಲು ಈ ತ್ರಿಶಂಕು ಸ್ಥಿತಿಯಿಂದ ಆಗಿರುವ ನಷ್ಟವೇನು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕಿರುವ ರೈಲು ಸೌಲಭ್ಯಗಳೇ ನಿದರ್ಶನ. ಇನ್ನಷ್ಟು ವಿಪರ್ಯಾಸವೆಂದರೆ, ದಿನವಿಡೀ ದುಡಿಯುವವನ ಹೊಟ್ಟೆಗೆ ಮಾತ್ರ ಮೂರು ಹೊತ್ತೂ ಉಪವಾಸ!

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ 113 ವರ್ಷಗಳ ಇತಿಹಾಸ ವಿದೆ. ಇದು ಬಹಳ ಹೆಮ್ಮೆ ಪಡುವ ವಿಷಯ. ಆದರೆ ಇರುವ ಪ್ಲಾಟ್‌ಫಾರಂಗಳು ಕೇವಲ ಮೂರು. 4ನೇ ಪ್ಲಾಟ್‌ ಫಾರಂ ಮಂಜೂರಾಗಿ 6 ವರ್ಷಗಳಾಗಿವೆ. 2013-14ರ ಬಜೆಟ್‌ನಲ್ಲೇ ಪ್ರಸ್ತಾವಿಸಲಾಗಿತ್ತು. ಅನುದಾನವೂ ಮಂಜೂರಾಯಿತು. ಕಾಮಗಾರಿ ಮಾತ್ರ ಇನ್ನೂ ಆರಂಭ ವಾಗಿಯೇ ಇಲ್ಲ. ಐದನೇ ಪ್ಲಾಟ್‌ಫಾರಂನ ನೆಪದಲ್ಲಿ ಈ ಕಾಮಗಾರಿ ಮುಂದೂಡಲಾಗುತ್ತಿದೆ. ಹೆಚ್ಚಿನ ರೈಲುಗಳನ್ನು ಓಡಿಸಿ ಎಂದು ಜನರು ಆಗ್ರಹಿಸಿದರೆ ರೈಲ್ವೇ ಅಧಿಕಾರಿಗಳು ಕೊಡುವ ಉತ್ತರ ಒಂದೇ- “ಪ್ಲಾಟ್‌ಫಾರಂಗಳು ಹೆಚ್ಚಿಲ್ಲ. ಹಾಗಾಗಿ ಹೊಸ ರೈಲುಗಳನ್ನು ಸೆಂಟ್ರಲ್‌ ನಿಲ್ದಾಣಕ್ಕೆ ತೆರಳಲು ಅನುಮತಿ ನೀಡ ಲಾಗುವುದಿಲ್ಲ’. ಮಂಗಳೂರು ರೈಲು ನಿಲ್ದಾಣದಿಂದ ಸಂಚರಿಸುವ ಒಟ್ಟು 31 ರೈಲುಗಳಲ್ಲಿ 23 ರೈಲುಗಳು ಕೇರಳ ಮತ್ತು ತಮಿಳುನಾಡು ಕಡೆಗೆ ಸಾಗುತ್ತವೆ. ಈ ಸಂಖ್ಯೆಗಾದರೂ ರೈಲ್ವೇ ನಿಲ್ದಾಣ ಪರಿಸ್ಥಿತಿ ಸುಧಾರಿಸಬೇಕಿತ್ತು. ಅದಿನ್ನೂ ಕನಸಾಗಿದೆ.

ಆದಾಯವಿದ್ದರೂ ಸೌಲಭ್ಯಗಳ ಉಪವಾಸ!
ಪ್ರಸ್ತುತ ತೋಕೂರುವರೆಗಿನ ಭಾಗ ದಕ್ಷಿಣ ರೈಲ್ವೇಯ ಪಾಲಾ^ಟ್‌ ವಿಭಾಗಕ್ಕೆ ಸೇರಿದ್ದರೆ, ಪಡೀಲ್‌ ಬಳಿಕದ ರೈಲು ಮಾರ್ಗ ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಹಾಗೂ ತೋಕೂರಿನಿಂದ ಆಚೆಗಿನ ವ್ಯಾಪ್ತಿ ಕೊಂಕಣ ರೈಲ್ವೇ ನಿಗಮಕ್ಕೆ ಸೇರಿಕೊಂಡಿದೆ. ಹಾಗಾಗಿ ಒಟ್ಟು ದಕ್ಷಿಣ ಕನ್ನಡ ಜಿಲ್ಲೆ ರೈಲು ಸೌಕರ್ಯ ಅಭಿವೃದ್ಧಿಗೆ ಮೂರು ವಿಭಾಗಗಳನ್ನು ಆಶ್ರಯಿಸಬೇಕಾಗಿದೆ. ಒಂದು ಸಣ್ಣ ಸೌಲಭ್ಯಕ್ಕೂ ಮೂರು ಬಾಗಿಲುಗಳನ್ನು ತಟ್ಟಬೇಕು. ಹಾಗಾಗಿ ಅಭಿವೃದ್ಧಿ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ.

ಚಿನ್ನದ ಕೋಳಿ ಬಿಟ್ಟುಕೊಡಲು ತಯಾರಿಲ್ಲ!
ಪ್ರಸ್ತುತ ತೋಕೂರುವರೆಗಿನ 30 ಕಿ.ಮೀ. ಭಾಗ ಪಾಲಾ^ಟ್‌ ವಿಭಾಗಕ್ಕೆ ಸೇರಿದೆ. ಇದರಲ್ಲಿ ನವಮಂಗಳೂರು ಬಂದರು ಮಾರ್ಗ ಕೂಡ ಸೇರಿದ್ದು, ವ್ಯಾಪ್ತಿ ಕಿರಿದಾದರೂ ಫಾಲಾ^ಟ್‌ ವಿಭಾಗಕ್ಕೆ ಶೇ. 98ರಷ್ಟು ಆದಾಯ ಮಂಗಳೂರು ವ್ಯಾಪ್ತಿಯಿಂದ ಬರುತ್ತಿದೆ.

ಮಂಗಳೂರು ಚಿನ್ನದ ಕೋಳಿ. ಅದನ್ನು ಕಳೆದುಕೊಂಡರೆ ತನ್ನ ಅಸ್ತಿತ್ವವೇ ನಾಶವಾಗಬಹುದೆಂಬ ಭಯದಿಂದ ಫಾಲಾ^ಟ್‌ ವಿಭಾಗದ ಅಧಿಕಾರಿಗಳು ನಾನಾ ಕಾರಣವೊಡ್ಡಿ ಮಂಗಳೂರು ಪ್ರತ್ಯೇಕ ವಿಭಾಗ ರಚನೆಯಾಗದಂತೆ ನೋಡಿ ಕೊಳ್ಳುತ್ತಿದ್ದಾರೆ. ಆದ ಕಾರಣ ಕರಾವಳಿಗರ ಬೇಡಿಕೆ ಇನ್ನೂ ಈಡೇರುತ್ತಿಲ್ಲ. ಅಷ್ಟೇ ಅಲ್ಲ; ಅತ್ತ ದಕ್ಷಿಣ ರೈಲ್ವೇ ಕೂಡ ತೋಕೂರಿನಿಂದ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದವರೆಗಿನ ಭಾಗವನ್ನು ನೈಋತ್ಯ ರೈಲ್ವೇಗೆ ಹಸ್ತಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

Advertisement

ವಿಭಾಗ ರಚನೆಗೆ ಹಿನ್ನಡೆ
ಉಳ್ಳಾಲದಿಂದ ಪ್ರಾರಂಭಿಸಿ ಮಂಗಳೂರು ಸೆಂಟ್ರಲ್‌, ಜಂಕ್ಷನ್‌ ಸೇರಿದಂತೆ ಮಂಗಳೂರು, ಉಡುಪಿ, ಕಾರವಾರ, ಹಾಸನ ಭಾಗದ ವ್ಯಾಪ್ತಿ ಸೇರಿಸಿ ಪ್ರತ್ಯೇಕ ಮಂಗಳೂರು ರೈಲ್ವೇ ವಿಭಾಗ ರಚಿಸಬೇಕೆಂಬ ಬೇಡಿಕೆ ಕಳೆದ ಹಲವು ವರ್ಷಗಳದ್ದು. ಆದರೆ ಮಂಗಳೂರು ವಿಭಾಗ ರಚನೆ ತಾಂತ್ರಿಕ ಕಾರಣಗಳಿಂದ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಜತೆಗೆ, ವಿಭಾಗ ರಚನೆಗೆ ಬೇಕಾಗುವಷ್ಟು ಕಿ.ಮೀ. ಇಲ್ಲ ಎಂಬ ಕಾರಣ ನೀಡಲಾಗುತ್ತಿದೆ. ಕೇರಳದ ರಾಜ್ಯಸಭಾ ಸದಸ್ಯ ಎಳಾಮಾರಂ ಕರೀಮ್‌ ಅವರು ಮಂಗಳೂರನ್ನು ಪಾಲಾ^ಟ್‌ ವಿಭಾಗ ದಿಂದ ಪ್ರತ್ಯೇಕಿಸುವ ಪ್ರಸ್ತಾವ ರೈಲ್ವೇ ಸಚಿವಾಲಯದಲ್ಲಿ ಇದೆಯೇ ಎಂದು ರಾಜ್ಯಸಭೆಯಲ್ಲಿ ಕಳೆದ ವರ್ಷ ಕೇಳಿದ್ದ ಪ್ರಶ್ನೆಗೆ ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ಅವರು, “ಅಂತಹ ಯಾವುದೇ ಪ್ರಸ್ತಾವ ಇಲ್ಲ’ ಎಂದು ತಿಳಿಸಿದ್ದರು. ಆ ಮೂಲಕ ಮಂಗಳೂರು ವಿಭಾಗ ರಚನೆಯಾಗಬೇಕೆನ್ನುವ ಕರಾವಳಿಗರ ಬಹುಕಾಲದ ಬೇಡಿಕೆಗೆ ತಣ್ಣೀರೆರಚಿದ್ದರು.

1991ರಿಂದೀಚೆಗೆ ದೇಶದ ವಿವಿಧ ಭಾಗಗಳಿಂದ ಬಂದ 32 ಹೊಸ ವಲಯ ಮತ್ತು 42 ಹೊಸ ವಿಭಾಗಗಳ ರಚನೆ ಬೇಡಿಕೆಗಳ ಕುರಿತಾಗಿ 2013ರಲ್ಲಿ ರೈಲ್ವೇ ಇಲಾಖೆ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಅಧ್ಯಯನ ನಡೆಸಿತ್ತು. ಪ್ರಸ್ತುತ ಇರುವ ವಲಯ ಮತ್ತು ವಿಭಾಗಗಳು ಪ್ರಯಾಣಿಕರ ಹಾಗೂ ಗೂಡ್ಸ್‌ ಆವಶ್ಯಕತೆಯನ್ನು ನೀಗಿಸಲು ಸಮರ್ಥವಾಗಿದ್ದು, ಹೊಸ ವಲಯ ಅಥವಾ ವಿಭಾಗಗಳ ರಚನೆ ಆವಶ್ಯಕತೆಯಿಲ್ಲ ಎಂದು ಅಭಿಪ್ರಾಯ ಪಟ್ಟಿತ್ತು. ದೇಶದಲ್ಲಿ ಈಗ ಒಟ್ಟು 17 ರೈಲ್ವೇ ವಲಯ ಮತ್ತು 68 ವಿಭಾಗಗಳಿದ್ದು, ಹೊಸ ವಿಭಾಗ ರಚನೆಯಿಂದ ಹೆಚ್ಚಿನ ಲಾಭವಿಲ್ಲ ಮತ್ತು ಮಂಗಳೂರು ವಿಭಾಗ ರಚನೆಯೂ ಸಾಧುವಲ್ಲ ಎಂದಿತ್ತು.

ಮೂರು ವಲಯ ನೂರು ನಷ್ಟ
ಉಳ್ಳಾಲದಿಂದ ತೋಕೂರುವರೆಗೆ ಮತ್ತು ಪಡೀಲ್‌ನಿಂದ ಸುಬ್ರಹ್ಮಣ್ಯ ರಸ್ತೆಯ ವರೆಗೆ ಒಟ್ಟು ಸುಮಾರು 120 ಕಿ.ಮೀ. ದೂರದ ರೈಲು ಹಳಿಯು ದ. ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿದೆ. ನಿಲ್ದಾಣ ತೆಗೆದುಕೊಂಡರೆ, ಮಂಗಳೂರು ಸೆಂಟ್ರಲ್‌ ಅತ್ಯಂತ ಹಳೇ ಮತ್ತು ದೊಡ್ಡ ರೈಲು ನಿಲ್ದಾಣ. ಮಂಗಳೂರು ಜಂಕ್ಷನ್‌ (ಕಂಕನಾಡಿ) ಮತ್ತು ತೋಕೂರು ಜಂಕ್ಷನ್‌ ಉಳಿದ ಪ್ರಮುಖ ನಿಲ್ದಾಣಗಳು. ಉಳಿದಂತೆ ಒಟ್ಟು ಆರು ಸ್ಟೇಷನ್‌ಗಳಿವೆ.

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಾದು ಹೋಗಿರುವ ರೈಲ್ವೇ ಮಾರ್ಗ ನೈಋತ್ಯ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ವ್ಯಾಪ್ತಿ 3 ವಿಭಾಗಕ್ಕೆ ಸೇರಿದೆ. ಬೇರೆ ವಿಭಾಗಗಳಲ್ಲಿ ಹಂಚಿ ಹೋಗಿರುವು ದರಿಂದಲೇ ಸೌಲಭ್ಯ ಸಿಗುತ್ತಿಲ್ಲ. ಮಂಗಳೂರು ವಿಭಾಗವಾದರೆ ಆಗುವ ಲಾಭ ಹೆಚ್ಚು. ಕನಿಷ್ಠ ನೈಋತ್ಯ ವಿಭಾಗಕ್ಕೆ ಸೇರಿದರೂ ಸಮಾಧಾನ ಪಡಬಹುದು. ಅದಿಲ್ಲದೇ ಹೋದರೆ ಮುಂದಿನ ನೂರು ವರ್ಷಗಳೂ ಬಂದರೂ ಈಗಿರುವ ಸೌಲಭ್ಯಗಳಲ್ಲೇ ದಿನ ಕಳೆಯಬೇಕಾಗಲಿದೆ.

120 ಕಿ.ಮೀ.ಗಳಲ್ಲಿ ದಕ್ಷಿಣ ಕನ್ನಡದಲ್ಲಿ ರೈಲು ಹಳಿ
09 ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು
113 ವರ್ಷ ಇತಿಹಾಸ ಮಂ. ಸೆಂಟ್ರಲ್‌ ನಿಲ್ದಾಣದ್ದು
06 4ನೇ ಪ್ಲಾಟ್‌ಫಾರ್ಮ್ ಮಂಜೂರಾಗಿ ವರ್ಷ

Advertisement

Udayavani is now on Telegram. Click here to join our channel and stay updated with the latest news.

Next