Advertisement

ರೈಲು ಮಾದರಿಯ ಶಾಲೆಗೆ ಬೇಕಿದೆ ಕೊಠಡಿಗಳು

07:16 PM Oct 08, 2021 | Team Udayavani |

ಬೈಂದೂರು: 2018ರಲ್ಲಿ ಕೇವಲ ಎಂಟು ಮಕ್ಕಳಿದ್ದು ಮುಚ್ಚುವ ಹಂತಕ್ಕೆ ಬಂದಿದ್ದ ಅರ್ಧ ಶತಮಾನ ಇತಿಹಾಸವಿರುವ ಶಾಲೆಯೊಂದು ಊರಿನವರು ಮತ್ತು ಶಿಕ್ಷಣ ಪ್ರೇಮಿಗಳ ಪ್ರಯತ್ನದಿಂದ ಪುನರ್‌ ಜನ್ಮ ಪಡೆದಿದೆ. ಆದರೆ ಕೊಠಡಿ ಸೇರಿದಂತೆ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಹಾಗೂ ಕೆಲವೊಂದು ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ..

Advertisement

ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ಥಾನಿ ನಾಗೂರು (ಉರ್ದು) ಇಲ್ಲಿ ಕೇವಲ 8 ವಿದ್ಯಾರ್ಥಿಗಳಿದ್ದ ಕಾರಣ 2018-19ರಲ್ಲಿ ಈ ಶಾಲೆಯನ್ನು ಇಲಾಖೆ ಬೇರೆ ಶಾಲೆಯೊಂದಿಗೆ ವಿಲೀನಕ್ಕೆ ಮುಂದಾಗಿತ್ತು. ಆದರೆ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಊರ ಹಿರಿಯರು, ಶಿಕ್ಷಣಾಭಿಮಾನಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಬಳಗ ಪಣ ತೊಟ್ಟಿದ್ದರು. ಇದರ ಪರಿಣಾಮ ಎಸ್‌. ಡಿ.ಎಂ.ಸಿ. ಜತೆಗೆ ಎಸ್‌.ಡಿ.ಸಿ. ರಚನೆಗೊಂಡು ಶಾಲೆಗೆ ಸ್ವಂತ ವಾಹನ ಸೌಲಭ್ಯ, ಪೀಠೊಪಕರಣ, ಶಾಲೆಗೆ ರೈಲು ಮಾದರಿ ಬಣ್ಣ , ತಾತ್ಕಾಲಿಕ ಭೌತಿಕ ವ್ಯವಸ್ಥೆ ಕಲ್ಪಿಸಿ, ಮನೆ ಮನೆಗೆ ತೆರಳಿ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿತ್ತು.

ಶಾಲೆಗೆ ಕೊಠಡಿ ,ಶಿಕ್ಷಕರ ಕೊರತೆ
ಮೇಲಧಿಕಾರಿಗಳಿಗೆ ಶಾಲೆಗೆ ಕೊಠಡಿ, ಶಿಕ್ಷಕರ ಆವಶ್ಯಕತೆಯಿದೆ ಎನ್ನುವ ಮನವಿ ನೀಡಲಾಗಿದೆ. ಆದರೆ ಇದುವರೆಗೆ ಹೊಸ ಕೊಠಡಿ ನಿರ್ಮಾಣವಾಗಿಲ್ಲ ಮತ್ತು ಶಿಕ್ಷಕರನ್ನು ನೀಡಿಲ್ಲ. ಅಲ್ಲದೇ ಒಂದನೇ ತರಗತಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಬೇಡಿಕೆ ಇಟ್ಟಿದ್ದರೂ ಫಲಪ್ರದವಾಗಿಲ್ಲ.

2023ಕ್ಕೆ 50 ವರ್ಷಗಳ ಸಂಭ್ರಮ
1ನೇ ತರಗತಿಯಲ್ಲಿ 43 ವಿದ್ಯಾರ್ಥಿಗಳು, 2ನೇ ತರಗತಿಯಲ್ಲಿ 30 ವಿದ್ಯಾರ್ಥಿಗಳು, 3ನೇ ತರಗತಿಯಲ್ಲಿ 20 ವಿದ್ಯಾರ್ಥಿಗಳು, 4ನೇ ತರಗತಿಯಲ್ಲಿ 7 ವಿದ್ಯಾರ್ಥಿಗಳು, 5ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು, 6ನೇ ತರಗತಿಯಲ್ಲಿ 13 ವಿದ್ಯಾರ್ಥಿಗಳು, 7ನೇ ತರಗತಿ ಯಲ್ಲಿ 12 ವಿದ್ಯಾರ್ಥಿಗಳಿದ್ದಾರೆ.

ಇದನ್ನೂ ಓದಿ:ನಬಾರ್ಡ್  ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ : ಮುಖ್ಯಮಂತ್ರಿ ಬೊಮ್ಮಾಯಿ

Advertisement

ಬೇಡಿಕೆಗಳು
– ಶಾಲೆಗೆ 4 ಕೊಠಡಿಗಳು ಆವಶ್ಯಕ.
– ನಾಲ್ವ ರು ಶಿಕ್ಷಕರ ಆವಶ್ಯಕತೆಯಿದೆ.
– ಶಾಲೆಗೆ ಗ್ರಂಥಾಲಯ ಬೇಕಿದೆ.
– ಪ್ರಯೋಗಾಲಯ ಅಗತ್ಯವಿದೆ.
– ಪುಟಾಣಿಗಳಿಗೆ ಬಾಲವನ ನಿರ್ಮಿಸಬೇಕಿದೆ.

ತುರ್ತು ಕೊಠಡಿ ಅಗತ್ಯ
ಸಾರ್ವಜನಿಕ ಶಿಕ್ಷಣ ಇಲಾಖೆ 2018- 19ರಲ್ಲಿ ಮಕ್ಕಳ ಕೊರತೆಯನ್ನು ಕಂಡು ಶಾಲೆಯ ವಿಲೀನಕ್ಕೆ ಮುಂದಾಗಿತ್ತು. ವಿವಿಧ ಸಮಿತಿ ನಿರ್ಮಿಸಿಕೊಂಡು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ಇರುವ ಕೊಠಡಿಗಳು ಕೇವಲ 4 ತರಗತಿ ನಡೆಸಲು ಸಾಕಾಗುತ್ತಿಲ್ಲ ಎನ್ನುವುದು ಶಿಕ್ಷಕರ ಅಭಿಪ್ರಾಯವಾಗಿದೆ.
-ಮಹಮ್ಮದ್‌ ರಫೀಕ್‌, ಎಸ್‌.ಡಿ.ಸಿ. ಅಧ್ಯಕ್ಷರು

ಶಾಲೆಗೀಗ ಪುನರ್‌ ಜನ್ಮ
ಶಾಲೆಯನ್ನು ಮುಚ್ಚಿಬಿಡುತ್ತಿದ್ದ ಸಂದರ್ಭದಲ್ಲಿ ವಿವಿಧ ಸಮಿತಿ ಹಾಗೂ ಊರವರ ನೆರವಿನಿಂದ ಶಾಲೆಗೀಗ ಪುನರ್‌ ಜನ್ಮ ಬಂದಿದೆ. ಮಕ್ಕಳ ದಾಖಲಾತಿ ಹೆಚ್ಚಿದ್ದು ಶಿಕ್ಷಕರ ಅಗತ್ಯವಿದೆ.
-ರವೀಂದ್ರ ಶ್ಯಾನುಭಾಗ್‌, ಎಸ್‌.ಡಿ.ಎಂ.ಸಿ. ಅಧ್ಯಕ್ಷರು

ಶಾಲೆಗೀಗ ಪುನರ್‌ ಜನ್ಮ
ಶಾಲೆಯ ಒಟ್ಟು 189 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಹೆಚ್ಚುವರಿ ಕೊಠಡಿಗಳು ಮತ್ತು ಶಿಕ್ಷಕರ ಅವಶ್ಯಕತೆಯಿದೆ.ಈ ಬಗ್ಗೆ ಈಗಾಗಲೇ ಶಿಕ್ಷಣಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ.
-ವಿಶ್ವನಾಥ ಪೂಜಾರಿ, ಮುಖ್ಯ ಶಿಕ್ಷಕರು

-ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next