Advertisement

Rain Alert: ಮುಂಬೈನಲ್ಲಿ ಮುಂದುವರೆದ ಮಳೆ… ರೆಡ್ ಅಲರ್ಟ್, ಶಾಲೆಗಳಿಗೆ ರಜೆ

09:06 AM Jul 09, 2024 | Team Udayavani |

ಮುಂಬಯಿ: ವಾಣಿಜ್ಯ ನಗರಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈಲು ಸಂಚಾರ, ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ.

Advertisement

ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನ ಪರದಾಡುವಂತಾಗಿದೆ, ಅಲ್ಲದೆ ರೈಲು ಹಳಿಗಳು ಮುಳುಗಡೆಯಾಗಿದ್ದು ಕೆಲ ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಅಲ್ಲದೆ ವಿಮಾನಗಳ ಹಾರಾಟದ ಮೇಲೂ ಪರಿಣಾಮ ಬೀರಿದೆ ಎನ್ನಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈ, ಥಾಣೆ, ನವಿ ಮುಂಬೈ, ಪನ್ವೆಲ್, ಪುಣೆ ಮತ್ತು ರತ್ನಗಿರಿ-ಸಿಂಧುದುರ್ಗದ ಗ್ರಾಮೀಣ ಭಾಗಗಳಲ್ಲಿನ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಮುಂಬೈ ವಿಶ್ವವಿದ್ಯಾಲಯದಲ್ಲಿ ಇಂದು (ಜುಲೈ 9) ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಭಾರಿ ಮಳೆಯಿಂದ ಪರೇಲ್, ಗಾಂಧಿ ಮಾರ್ಕೆಟ್, ಸಂಗಮ್ ನಗರ ಮತ್ತು ಮಲಾಡ್ ಸುರಂಗಮಾರ್ಗಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು ಅಲ್ಲದೆ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಾಯಿತು.

ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದ 40ಕ್ಕೂ ಹೆಚ್ಚು ಘಟನೆಗಳು ವರದಿಯಾಗಿದ್ದು ಹಲವಾರು ವಾಹನಗಳು ಜಖಂಗೊಂಡಿವೆ, ಸಾಂತಾಕ್ರೂಜ್ ಪೂರ್ವದಲ್ಲಿ 72 ವರ್ಷದ ಮಹಿಳೆಯೊಬ್ಬರು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಷ್ಟು ಮಾತ್ರವಲ್ಲದೆ ಕೆಲವು ಕಡೆ ಮನೆಯ ಗೋಡೆಗಳು ಕುಸಿತಗೊಂಡಿದ್ದು ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ.

Advertisement

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಳೆ ನೀರು ನಿಂತ ಪ್ರದೇಶಗಳಿಗೆ ಬೇಕಾಗುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಅಲ್ಲದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಮುಂಬೈನ ಕುರ್ಲಾ ಮತ್ತು ಘಾಟ್‌ಕೋಪರ್ ಪ್ರದೇಶಗಳಲ್ಲಿ ಮತ್ತು ಥಾಣೆ, ವಸಾಯಿ (ಪಾಲ್ಘರ್), ಮಹಾಡ್ (ರಾಯಗಡ್), ಚಿಪ್ಲುನ್ (ರತ್ನಗಿರಿ), ಕೊಲ್ಲಾಪುರ, ಸಾಂಗ್ಲಿ, ಸತಾರಾ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಇತರ ಭಾಗಗಳಲ್ಲಿ ನಿಯೋಜಿಸಲು ಸೂಚನೆ ನೀಡಿದ್ದಾರೆ.

ಭಾರೀ ಮಳೆಯ ನಡುವೆ ಮುಂಬೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 30 ಕ್ಕೂ ಹೆಚ್ಚು ಪ್ರಾಣಿಗಳು, ಪಕ್ಷಿಗಳನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ, ಕಾಲಿಗೆ ಗುಂಡು ಹೊಡೆದು ಆರೋಪಿ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next