ನವದೆಹಲಿ: ವಿಜಯವಾಡದಿಂದ ದೆಹಲಿಗೆ 30 ಗಂಟೆ ಸೀಟು ಸಿಗದೆ ರಾಷ್ಟ್ರೀಯ ಕಿರಿಯರ ಅಥ್ಲೀಟ್‌ಗಳು ರೈಲು ಪ್ರಯಾಣ ಮಾಡಿದ ಬಳಿಕ ಮೈ, ಕೈ ನೋವು ತಾಳಲಾರದೇ 28 ಮಂದಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಅಥ್ಲೀಟ್‌ಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ದಿಲ್ಲಿ ಅಥ್ಲೆಟಿಕ್ಸ್ ಸಂಸ್ಥೆ ವಿರುದ್ಧ ಸಾರ್ವಜನಿಕ ವಲಯದಿಂದ ಈಗ ಭಾರೀ ಆಕ್ರೋಶ ವ್ಯಕ್ತವಾಗಿವೆ.
ಏನಿದು ಘಟನೆ?: ನ.10 ರಿಂದ ನ.16ರ ವರೆಗೆ ವಿಜಯವಾಡದಲ್ಲಿ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು. ದೆಹಲಿಯಿಂದ 30 ಕ್ರೀಡಾಪಟುಗಳು ತೆರಳಿದ್ದರು. ಹೋಗುವಾಗ ಸುಖಕರ ಪ್ರಯಾಣ ಮಾಡಿದ್ದ ಅಥ್ಲೀಟ್‌ಗಳಿಗೆ ಬರುವಾಗ ಮಾತ್ರ ನರಕ ಪ್ರಯಾಣ ಅನುಭವ. ಕೇವಲ 2 ಟಿಕೆಟ್‌ಗಳು ಮಾತ್ರ ದೃಢಪಟ್ಟಿದ್ದವು. ಉಳಿದಂತೆ 28 ಟಿಕೆಟ್ ಗಳು ದೃಢಪಟ್ಟಿರಲಿಲ್ಲ. ಹೀಗಿದ್ದರೂ ಅಥ್ಲೀಟ್‌ಗಳನ್ನು ರೈಲಿನಲ್ಲಿ ಪ್ರಯಾಣ ಮಾಡಿಸಲಾಗಿದೆ. ಸೀಟು ಸಿಗದ ಕಾರಣ ಅಥ್ಲೀಟ್‌ಗಳು ಸೀಟ್‌ನ ಕೆಳ ಭಾಗದಲ್ಲಿ
ಮತ್ತು ಶೌಚಾಲಯದ ಪಕ್ಕದಲ್ಲಿ ನಿದ್ರೆ ಮಾಡಿ ಕೊಂಡು ಪ್ರಯಾಣಿಸಿದ್ದಾರೆ. ಪರಿಣಾಮ ಅಥ್ಲೀಟ್‌ಗಳು ಮೈ, ಕೈ ನೋವಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟ: ತಮ್ಮ ಪರಿಸ್ಥಿತಿಯನ್ನು ಅಥ್ಲೀಟ್‌ಗಳು ಸ್ವತಃ ವಿಡಿಯೋ ಮಾಡಿದ್ದಾರೆ. ಫೇಸ್ ಬುಕ್‌ಗೆ ಅಪ್‌ಲೋಡ್ ಮಾಡಿದ್ದಾರೆ. ತಮ್ಮ ನೋವು ತೊಡಿಕೊಂಡಿದ್ದಾರೆ. ಸದ್ಯ ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ದೆಹಲಿ ಅಥ್ಲೆಟಿಕ್ಸ್ ಸಂಸ್ಥೆ ವಿರುದ್ಧ ಕ್ರೀಡಾಭಿಮಾನಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.