Advertisement

ಕಡಲ ತೀರದ ಸೈಕಾಲಜಿಕಲ್‌ ಕಥೆ 

12:30 AM Feb 01, 2019 | |

ಕೆಲಕಾಲ ಚಿತ್ರ ನಿರ್ಮಾಣದಿಂದ ಬ್ರೇಕ್‌ ತೆಗೆದುಕೊಂಡಿದ್ದ ನಿರ್ಮಾಪಕ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಈಗ “ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. “ಅರಬ್ಬಿ ಕಡಲ ತೀರದಲ್ಲಿ’ ಚಿತ್ರದ ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಕೃಷ್ಣೇಗೌಡ, ಇತ್ತೀಚೆಗೆ ತಮ್ಮ ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಬಂದಿದ್ದ “ಅರಬ್ಬಿ ಕಡಲ ತೀರದಲ್ಲಿ’ ಚಿತ್ರತಂಡ ಚಿತ್ರದ ಕುರಿತಾದ ಕೆಲವು ಸಂಗತಿಗಳನ್ನು ತೆರೆದಿಟ್ಟಿತು. 

Advertisement

ಚಿತ್ರದ ಬಗ್ಗೆ ಮೊದಲಿಗೆ ಮಾತಿಗಿಳಿದ ನಿರ್ಮಾಪಕ ಕೃಷ್ಣೇಗೌಡ, “ಕೆಲವು ವರ್ಷಗಳಿಂದ ಚಿತ್ರರಂಗದ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಚಿತ್ರ ನಿರ್ಮಾಣ ಸಾಧ್ಯವಾಗಿರಲಿಲ್ಲ. ಬಹಳ ಸಮಯದ ನಂತರ ನನಗೆ ಇಷ್ಟವಾಗುವಂತಹ ಕಥೆಯೊಂದು ಸಿಕ್ಕಿತು. ಅದನ್ನು ಈಗ ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ಚಿತ್ರದಲ್ಲಿ ನನ್ನ ವಯಸ್ಸಿಗೆ ಮತ್ತು ನಾನು ಮಾಡಬಹುದಾದ ಪಾತ್ರ ಇದ್ದಿದ್ದರಿಂದ ಆ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎಂದರು. 

ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರಾಂತ ಛಾಯಾಗ್ರಹಕನಾಗಿರುವ ಕಥಾ ನಾಯಕನಿಗೆ ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಅಪ್ಪನ ಭವ್ಯ ಬಂಗಲೆ, ಶ್ರೀಮಂತಿಕೆ ಎಲ್ಲಾ ಇದ್ದರೂ, ಅದೆಲ್ಲವನ್ನೂ ಬಿಟ್ಟು ಮಾಡೆಲಿಂಗ್‌ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಹೀಗಿರುವಾಗಲೇ, ತಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗುವ ಮುನ್ನವೇ ಆಕೆ ಬರ್ಬರವಾಗಿ ಕೊಲೆಯಾಗುತ್ತಾಳೆ. ಆ ಕೊಲೆಯ ನಂತರ ಇವನೊಬ್ಬ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ಬಿಂಬಿತವಾಗಿ, ಅಸಹಾಯಕನಾಗುತ್ತಾನೆ. ಹೀಗಿರುವಾಗಲೇ, ಅವನ ಜೀವನದಲ್ಲಿ ಮತ್ತೂಂದು ಹುಡುಗಿಯ ಪ್ರವೇಶವಾಗುತ್ತದೆ. ಆಕೆಯೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವಾಗಲೇ, ಮತ್ತೂಂದು ಅನಿರೀಕ್ಷಿತ ಘಟನೆಯೊಂದು ನಡೆದು ಹೋಗುತ್ತದೆ. ಅದು ಏನೆಂಬುದೇ ಚಿತ್ರದ ಕ್ಲೈಮ್ಯಾಕ್ಸ್‌ ಅದನ್ನು ತೆರೆಮೇಲೆ ನೋಡಬೇಕು ಎನ್ನುತ್ತದೆ ಚಿತ್ರತಂಡ. 

ಹಿರಿಯ ನಿರ್ದೇಶಕ ಉಮಾಕಾಂತ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಉಮಾಕಾಂತ್‌, “ಕೆಲವರ್ಷಗಳ ಹಿಂದೆ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು  ತೆಗೆದುಕೊಂಡು ಈ ಚಿತ್ರವನ್ನು ಮಾಡಲಾಗಿದೆ. ಚಿತ್ರ ಪ್ರತಿಹಂತದಲ್ಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತ ಸಾಗುತ್ತದೆ. ಸದ್ಯ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ’ ಎಂದರು.    

        ಇನ್ನು ಚಿತ್ರದಲ್ಲಿ ಪತ್ರಕರ್ತೆಯಾಗಿ ವೈಷ್ಣವಿ ಮೆನನ್‌ ಮತ್ತು ಮಾಡೆಲ್‌ ಪಾತ್ರದಲ್ಲಿ ರಂಜಿತಾ ರಾವ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ತಮ್ಮ ಪಾತ್ರದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಉಳಿದಂತೆ ರಮೇಶ್‌ ಭಟ್‌, ಸುಂದರ್‌, ಬಿರಾದಾರ್‌ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಡಲತೀರದ ಸೈಕಲಾಜಿಕಲ್‌ ಥ್ರಿಲ್ಲರ್‌ ಕಥೆಯಾಗಿದ್ದರಿಂದ ಚಿತ್ರವನ್ನು ಬೈಂದೂರು, ಕುಂದಾಪುರ, ಬ್ರಹ್ಮಾವರ, ಬೆಂಗಳೂರು, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಕೇವಲ ಒಂದು ಹಾಡಿದ್ದು, ಎ.ಟಿ ರವೀಶ್‌ ಹಾಡಿಗೆ ಸಂಗೀತ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.   

Advertisement
Advertisement

Udayavani is now on Telegram. Click here to join our channel and stay updated with the latest news.

Next