ತನ್ನ ಟೈಟಲ್ ಮತ್ತು ಫಸ್ಟ್‌ಲುಕ್ ಮೂಲಕ ಗಮನ ಸೆಳೆದಿದ್ದ “ಮಹಿಷಾಸುರ’ ಚಿತ್ರದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ “ಮಹಿಷಾಸುರ’ ಚಿತ್ರದಲ್ಲಿ ರಾಜ್ ಮಂಜು, ಸುದರ್ಶನ್ ನಾಯಕರಾಗಿ, ಬಿಂದುಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವವಿರುವ ಉದಯ ಪ್ರಸನ್ನ ಮೊದಲ ಬಾರಿಗೆ “ಮಹಿಷಾಸುರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ – ಕಟ್ ಹೇಳಿದ್ದಾರೆ.
“ಮಹಿಷಾಸುರ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಉದಯ್ ಪ್ರಸನ್ನ, “ಸಮಾಜಕ್ಕೆ ಒಂದು ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ. ಮನುಷ್ಯ ಎಷ್ಟೇ ಒಳ್ಳೆಯವನಾಗಿದ್ದರೂ ಆತ ತಾಳ್ಮೆ, ಸಹನೆ ಕಳೆದುಕೊಂಡರೆ, ಅವನ ಅಂತರಂಗದಲ್ಲಿರುವ ಅಸುರ “ಮಹಿಷಾಸುರ’ನ ರೂಪ ತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಕಣ್ಣಾರೆ ಕಂಡ ನೈಜಘಟನೆಯನ್ನುಪ್ರೇರಣೆಯಾಗಿಟ್ಟುಕೊಂಡ ಈ ಸಿನಿಮಾ ಮಾಡಲಾಗಿದೆ. ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದ ಯುವಕರಿಬ್ಬರು ಒಂದು ಹೆಣ್ಣಿಗಾಗಿ ಹೇಗೆ ಅಸುರ ರೂಪ ತಾಳುತ್ತಾರೆ ಅನ್ನೋದು ಕಥೆಯ ಒಂದೆಳೆ’ ಎಂದು ವಿವರಣೆ ಕೊಡುತ್ತಾರೆ.
“ಹುಟ್ತಾನೇ ಯಾರೂ ಕೆಟ್ಟವರಾಗಿ ಜನಿಸುವುದಿಲ್ಲ, ನಮ್ಮ ಅಕ್ಕಪಕ್ಕದವರೇ ನಮ್ಮನ್ನು ಮಹಿಷಾಸುರ ಆಗುವ ಹಾಗೆ ಮಾಡುತ್ತಾರೆ. ಇಂದಿನ ರಾಜಕಾರಣಿಗಳು ತಮ್ಮ ವೋಟ್ ಬ್ಯಾಂಕ್‌ಗೋಸ್ಕರ ಯುವ ಜನರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಉದಯ ಪ್ರಸನ್ನ. ಇನ್ನು “ಮೇಲುಕೋಟೆ ಟೂರಿಂಗ್ ಟಾಕೀಸ್’ ಬ್ಯಾನರ್‌ನಲ್ಲಿ ಶ್ರೀಮತಿ ಪಾರ್ವತಿ ಚಂದ್ರಶೇಖರ್, ಶ್ರೀಮತಿ ಲೀಲಾವತಿ ಸುರೇಶ್ ಕುಮಾರ್ ಹಾಗೂಪ್ರೇಮಾ ಚಂದ್ರಯ್ಯ “ಮಹಿಷಾಸುರ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸುನಿಲ್ ಕೌಶಿ ಸಂಗೀತ, ವೇಣು ಸಾಹಿತ್ಯ, ಕೃಷ್ಣಛಾಯಾಗ್ರಹಣವಿದೆ. ಮೇಲುಕೋಟೆ, ಮಂಡ್ಯ, ಮೈಸೂರು, ರಾಮನಗರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಇತ್ತೀಚೆಗೆ “ಮಹಿಷಾಸುರ’ ಚಿತ್ರದ ಆಡಿಯೋವನ್ನು ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಬಿಡುಗಡೆಗೊಳಿಸಿದ್ದರು. ಸದ್ಯ ಬಿಡುಗಡೆಯಾಗಿರುವ “ಮಹಿಷಾಸುರ’ ಚಿತ್ರದ ಟೀಸರ್, ಹಾಡು ಮತ್ತು ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ, ಮುಂಬರುವ ಜ. 8ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.