ವಾಡಿ: ಇಸ್ಪೀಟ್ ಅಡ್ಡೆಯ ಮೇಲೆ ನಡೆದ ಪೊಲೀಸರ ದಾಳಿಗೆ ಹೆದರಿ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಂಭವಿಸಿದೆ.
ಲಾಡ್ಲಾಪುರ ಗ್ರಾಮ ನಿವಾಸಿ ಸಿದ್ದಪ್ಪ ಕೊಂಡಾ (20) ಸಾವನ್ನಪ್ಪಿದ ಯುವಕ. ನಿನ್ನೆ ಮಂಗಳವಾರ ತಡರಾತ್ರಿ ಲಾಡ್ಲಾಪುರ ಗ್ರಾಮದ ಹಾಜಿ ಸರ್ವರ್ ದರ್ಗಾದ ಗುಡ್ಡದ ಹತ್ತಿರ ಇಸ್ಪೀಟ್ ಆಡುತ್ತಿದ್ದ 10 ರಿಂದ 15 ಜನರ ತಂಡದ ಮೇಲೆ ವಾಡಿ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಜೂಜಾಟ ಆಡುತ್ಥಿದ್ದವರು ಮತ್ತು ವೀಕ್ಷಕರು ಪೊಲೀಸರಿಗೆ ಹೆದರಿ ಓಡಿ ದಿಕ್ಕಾಪಾಲಾಗಿದ್ದಾರೆ. ಗುಡ್ಡದ ಸುತ್ತಲೂ ಮುಳ್ಳು ಕಂಟಿ ಪ್ರದೇಶವಿದ್ದು, ತಗ್ಗು ಗುಂಡಿಗಳಿವೆ. ಹೀಗೆ ಓಡುವಾಗ ಕೆಲವರು ಪೊಲೀಸರ ಅತಿಥಿಯಾಗಿದ್ದಾರೆ. ಸಿದ್ದಪ್ಪ ಮಾತ್ರ ತಪ್ಪಿಸಿಕೊಂಡು ಇಡೀ ರಾತ್ರಿ ಕಣ್ಮರೆಯಾಗಿದ್ದ.
ಎಲ್ಲಿಯಾದರೂ ಅಡಗಿಕೊಂಡಿರಬಹುದು ಮರಳಿ ಮನೆಗೆ ಬರುತ್ತಾನೆ ಎಂದು ಭಾವಿಸಿದ್ದ ಕುಟುಂಬ ಸದಸ್ಯರಿಗೆ ಬೆಳಿಗ್ಗೆ ಶಾಕ್ ಉಂಟಾಗಿದೆ. ಸಿದ್ದಪ್ಪನ ಮೃತದೇಹ ಗುಡ್ಡದ ಸುತ್ತ ಇರುವ ಗುಡಿಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು, ಲಾಡ್ಲಾಪುರ ಮಾರ್ಗದ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಮೃತನ ಸಾವಿಗೆ ಕಾರಣರಾದ ಪೊಲೀಸರ ಮೇಲೆ ಕ್ರಮಕೈಗೊಳ್ಳಬೇಕು. ಹಾಗೂ ಆತನ ಸಾವಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.