ಥಾಣೆ: ಒಂದೇ ಕುಟುಂಬದ ಐವರು (ಅತ್ತೆ, ಸೊಸೆ, ಇಬ್ಬರು ಮೊಮ್ಮಕ್ಕಳು ಮತ್ತು ಸಂಬಂಧಿ) ನೀರು ತುಂಬಿದ ಕಲ್ಲಿನ ಕೋರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂದಾಪ್ ಸಮೀಪದ ಡೊಂಬಿವಲಿಯಲ್ಲಿ ಸಂಭವಿಸಿದೆ.
ಮೃತರನ್ನು ಮೀರಾ ಗಾಯಕ್ವಾಡ್ (55), ಅಪೇಕ್ಷಾ (30), ಮಯೂರೇಶ್ (15), ಮೋಕ್ಷಾ (13) ಮತ್ತು ಸಂಬಂಧಿ ನೀಲೇಶ್ ಗಾಯಕ್ವಾಡ್ (15) ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ದಳ ಮೃತರ ದೇಹವನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆ ಗಾಗಿ ಹತ್ತಿರದ ಶಾಸ್ತ್ರೀ ನಗರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ಮೃತರು ಬಟ್ಟೆ ಒಗೆಯುವ ಸಲುವಾಗಿ ಕೋರೆಗೆ ತೆರಳಿದ್ದರು. ಮನೆಯವರೆಲ್ಲರೂ ಬಟ್ಟೆ ಒಗೆಯುವುದರಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಕ್ವಾರಿಯ ದಂಡೆಯ ಮೇಲೆ ಕುಳಿತಿದ್ದ ಮೊಮ್ಮಗ ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಅವನನ್ನು ರಕ್ಷಿಸುವ ಸಲುವಾಗಿ ಇನ್ನೋರ್ವ ಮೊಮ್ಮಗಳು ಹಾಗೂ ಸಂಬಂಧಿ, ಇಬ್ಬರು ಮಹಿಳೆಯರು ನೀರಿಗೆ ಹಾರಿದ್ದಾರೆ. ಪರಿಣಾಮ ಅವರು ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯರೊಬ್ಬರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಲಾಗಿದೆ.
ಘಟನೆ ಕುರಿತು ಮಾತನಾಡಿದ ಡೊಂಬಿವಲಿಯ ಅಸಿಸ್ಟೆಂಟ್ ಕಮೀಶನರ್ ಆಫ್ ಪೊಲೀಸ್ ಜೆ.ಡಿ. ಮೊರೆ ಅವರು, ಮೊದಲ ನೋಟಕ್ಕೆ ಈ ಘಟನೆಯು ನೀರಿನಲ್ಲಿ ಮೊದಲು ಮುಳುಗಿದವರನ್ನು ರಕ್ಷಿಸಲು ಹೋಗಿ ಉಳಿದವರೂ ಕೂಡ ನೀರಿನಲ್ಲಿ ಮುಳುಗಿ ಮೃತರಾಗಿರುವಂತೆ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.