ಬೆಂಗಳೂರು: ವೃದ್ಧ ತಾಯಿಯನ್ನು ಊರಿಂದ ಕರೆತಂದು ಮನೆಯಲ್ಲಿ ಇಟ್ಟುಕೊಂಡಿದ್ದ ಪುತ್ರ. ಅತ್ತೆಯ ಸೇವೆ ಮಾಡಲು ನಿರಾಕರಿಸಿದ ಪತ್ನಿ. ಅದರಿಂದ ಬೇಸತ್ತ ಪುತ್ರ, ತಾಯಿ ಜತೆ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗ್ಗನಹಳ್ಳಿ ಬಳಿಯ ಶ್ರೀಗಂಧನಗರದ ನಿವಾಸಿಗಳಾದ ಭಾಗ್ಯಮ್ಮ (57) ಆಕೆಯ ಪುತ್ರ ಶ್ರೀನಿವಾಸ್ (33) ಆತ್ಮಹತ್ಯೆ ಮಾಡಿಕೊಂಡ ತಾಯಿ, ಮಗ. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀನಿವಾಸ್ ಪತ್ನಿ ಸಂಧ್ಯಾ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಕೊಡಗು ಜಿಲ್ಲೆ ಸಿದ್ದಾಪುರ ಮೂಲದ ಶ್ರೀನಿವಾಸ್, ಔಷಧ ಮಾರಾಟ ಕಂಪನಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಶ್ರೀಗಂಧದನಗರದ ನಿವಾಸಿ ಸಂಧ್ಯಾ ಬಿ.ಟೆಕ್ ಪದವಿಧರೆಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 8 ವರ್ಷಗಳ ಹಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಮಗ ಇದ್ದಾನೆ. ಸಂಧ್ಯಾಗೆ ಪೋಷಕರು ತಮ್ಮ ಮನೆಯ ಪಕ್ಕದಲ್ಲೇ ನಿವೇಶನ ನೀಡಿದ್ದರು. ಹೀಗಾಗಿ ಶ್ರೀನಿವಾಸ್ ಮನೆ ನಿರ್ಮಿಸಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದರು. ಶ್ರೀನಿವಾಸ್ ತಂದೆ-ತಾಯಿ ಸಿದ್ದಾಪುರದಲ್ಲೇ ನೆಲೆಸಿದ್ದರು. ತಂದೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿದರೆ, ತಾಯಿ ಗೃಹಿಣಿಯಾಗಿದ್ದರು. ಇತ್ತೀಚೆಗೆ ತಂದೆಗೆ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ವಯಸ್ಸಾಗಿದ್ದರಿಂದ ತಂದೆ ನೋಡಿಕೊಳ್ಳಲು ತಾಯಿಗೆ ಕಷ್ಟವಾಗುತ್ತದೆ ಎಂದು, ತಂದೆ-ತಾಯಿಯನ್ನು ಕೆಲದಿನಗಳ ಹಿಂದೆ ಶ್ರೀನಿವಾಸ್ ಬೆಂಗಳೂರಿನ ಮನೆಗೆ ಕರೆತಂದಿದ್ದರು. ಆದರೆ,ಪತ್ನಿ ಸಂಧ್ಯಾಗೆ ಅದು ಇಷ್ಟವಿರಲಿಲ್ಲ. ಅದೇ ವಿಚಾರಕ್ಕೆ ಪತಿ ಜತೆ ನಿತ್ಯ ಜಗಳ ಮಾಡುತ್ತಿದ್ದಳು. ಅಲ್ಲದೆ, ಪಕ್ಕದಲ್ಲಿರುವ ತವರು ಮನೆಗೆ ಹೋಗುತ್ತಿದ್ದರು.
ಮತ್ತೂಂದೆಡೆ ತಮ್ಮ ವಿಚಾರಕ್ಕೆ ಮಗ-ಸೊಸೆ ನಿತ್ಯ ಜಗಳ ಮಾಡಿಕೊಳ್ಳುತ್ತಾರೆ ಎಂದು ಭಾಗ್ಯಮ್ಮ ಬೇಸರಗೊಂಡಿದ್ದರು. ಈ ಮಧ್ಯೆ ಶ್ರೀನಿವಾಸ್ ಪೋಷಕರನ್ನು ಬೆಂಗಳೂರಿಗೆ ಕರೆತಂದಿದ್ದು, ಸಂಧ್ಯಾ ಮತ್ತು ಆಕೆಯ ಪೋಷಕರಿಗೆ ಇಷ್ಟ ಇರಲಿಲ್ಲ. ಅದೇ ವಿಚಾರಕ್ಕೆ ಶ್ರೀನಿವಾಸ್ ಪತ್ನಿಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಅದರಿಂದ ಕೋಪಗೊಂಡಿದ್ದ ಸಂಧ್ಯಾ ನ.9ರಂದು ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಪೊಲೀಸರು ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇಬ್ಬರಿಗೂ ಬುದ್ಧಿವಾದ ಹೇಳಿ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಂಡಿದ್ದರು. ಈ ಎಲ್ಲ ವಿಚಾರಗಳಿಂದ ನೊಂದಿದ್ದ ತಾಯಿ, ಮಗ ಭಾನುವಾರ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಧ್ಯಾಹ್ನ ಸಂಧ್ಯಾ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾವನಿಗೆವಾಟ್ಸ್ ಆ್ಯಪ್: ಶ್ರೀನಿವಾಸ್ ಆತ್ಮಹತ್ಯೆಗೂ ಮೊದಲು ತನ್ನ ಸೋದರ ಮಾವನಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದಾರೆ. ತಂದೆ-ತಾಯಿ ನೋಡಿಕೊಳ್ಳಲು ಪತ್ನಿ ಮತ್ತು ಆಕೆಯ ಮನೆಯವರು ಅವಕಾಶ ನೀಡುತ್ತಿಲ್ಲ. ಅಲ್ಲದೆ, ತನ್ನ ಮತ್ತು ತನ್ನ ಪೋಷಕರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಂದೇಶದಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.