ಪಡುಬಿದ್ರಿ: ಠಾಣಾ ವ್ಯಾಪ್ತಿಯ ಮೂಲ್ಕಿ ಸೇತುವೆ ಮೇಲೆ ಟ್ಯಾಂಕರ್ – ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ( ಮಾ. 7 ರಂದು ) ನಡೆದಿದೆ.
ಮೃತರನ್ನು ತೀರ್ಥಹಳ್ಳಿ ಕೋಳಿಕಾಲು ಗುಡ್ಡೆ ನಿವಾಸಿ, ದಂಪತಿ ಅಕ್ಬರ್ ಪಾಶ(61) ಹಾಗೂ ಖತೀಜಾಬಿ(46) ಎಂದು ಗುರುತಿಸಲಾಗಿದೆ. ದಂಪತಿ ಮಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ತಮಗಾಗಿ ಪಾಸ್ ಪೋರ್ಟ್ ಮಾಡಿಸಲೆಂದು ಹೊರಟಿದ್ದರು ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಮೂಲ್ಕಿ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಆಕ್ಟೀವ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದು, ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಟ್ಯಾಂಕರ್ ಇಬ್ಬರ ತಲೆಯ ಮೇಲೆ ಹರಿದ ಪರಿಣಾಮ ತೀರ್ಥಹಳ್ಳಿ ಮೂಲದ ದಂಪತಿಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೂಲ್ಕಿ ಸೇತುವೆ ಸಮೀಪ ಹೆದ್ದಾರಿ ಮೇಲ್ಪದರವನ್ನು ತೆಗೆಯಲಾಗಿತ್ತು. ಇದರಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಾಗಿ ಹಲವು ಬಾರಿ ಹೇಳಲಾಗಿತ್ತು. ಆದರೂ ನವಯುಗ ನಿರ್ಮಾಣ ಕಂಪೆನಿಯು ಜರೂರಾಗಿ ಇಂತಹಾ ಕಾಮಗಾರಿಗಳನ್ನು ಮುಗಿಸದೇ ಇದ್ದುದರಿಂದಲೇ ಇಂದು ಎರಡು ಅಮಾಯಕ ಜೀವಗಳು ಬಲಿಯಾಗಿವೆ.
ಹೆದ್ದಾರಿ ಅಧಿಕಾರಿಗಳ ಸಹಿತ ಗುತ್ತಿಗೆದಾರ ಕಂಪೆನಿ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದಾರೆ.