Advertisement

ಯುವತಿ ನಿಶ್ಚಿತಾರ್ಥ ಮುರಿಯಲು ಯತ್ನ; ಸಹೋದರನ ಭೀಕರ ಕೊಲೆ

10:58 AM Jun 06, 2021 | Team Udayavani |

ಕಲಬುರಗಿ: ನಿಶ್ಚಿತಾರ್ಥ ಆಗುತ್ತಿದ್ದ ಸಂಬಂಧ ಮುರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ನಡೆದ ಜಗಳದಲ್ಲಿ ಮಗನ ಕೊಲೆಯಾಗಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ಸಂಬಂಧ ಮುರಿಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಗುಂಪೊಂದು ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆ ಬಳಿ ಶನಿವಾರ ನಡೆದಿದೆ.

ನಿಖಿಲ್ ರಾಜು ಕನೇಗಾರ (22) ಕೊಲೆಯಾಗಿರುವ ಯುವಕ. ಈತ ಕರುಣೇಶ್ವರ ನಗರದ ನಿವಾಸಿಯಾಗಿದ್ದ. ಈತನ ತಾಯಿ ಕಮಲಾ ಎನ್ನುವರಿಗೆ ಗಂಭೀರ ಗಾಯಗಳಾಗಿವೆ. ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ನಿಖಿಲ್ ಸಹೋದರ ವಿಕಾಸ ಸೇರಿದಂತೆ ಮೂವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಮಲಮ್ಮ ತರಕಾರಿ ಮಾರಾಟ ಮಾಡಿಕೊಂಡಿದ್ದರೆ, ಪತಿ ರಾಜು ರಾಮ ಮಂದಿರ ಸಮೀಪದ ಕಾಲೇಜೊಂದರಲ್ಲಿ ಅಡುಗೆ ತಯಾರಕಾಗಿ ಕೆಲಸಮಾಡುತ್ತಿದ್ದಾರೆ. ಮೂವರು ಮಕ್ಕಳೊಂದಿಗೆ ಕರುಣೇಶ್ವರ ನಗರದಲ್ಲಿ ವಾಸವಾಗಿದ್ದರು. ಕೊಲೆ ಯಾಗಿರುವ ನಿಖಿಲ್‌ ಭಜಿ ಬಂಡಿ ಇಟ್ಟುಕೊಂಡಿದ್ದ. ನಿಖಿಲ್ ನ ಸಹೋದರಿ ಮದುವೆಯನ್ನು ಮುಂಬೈನಲ್ಲಿರುವ ವ್ಯಕ್ತಿಯ ಜತೆಗೆ ನಿಗದಿಪಡಿಸಲಾಗಿತ್ತು. ಸೋಮವಾರ ಸರಳವಾಗಿ ನಿಶ್ಚಿತಾರ್ಥ ನಡೆಸಲು ತಯಾರಿ ನಡೆದಿತ್ತು. ಇದನ್ನು ಅರಿತ ಸ್ಟೇಷನ್‌ ಬಜಾರ ಪ್ರದೇಶ ಯುವಕರಿಬ್ಬರು ಸೇರಿಕೊಂಡು ಸಂಬಂಧ ಮುರಿಯಲು ಕುತಂತ್ರ ಮಾಡಿ, ಯುವಕನಿಗೆ ಕರೆ ಮಾಡಿ ಇಲ್ಲದ್ದನ್ನು ಹೇಳಿದ್ದರು. ಆ ಯುವಕ ಮರಳಿ ಯುವತಿ ಮನೆಯವರಿಗೆ ತಿಳಿಸಿದ್ದ. ಅಲ್ಲದೇ ಆ ಸಂಖ್ಯೆಗಳನ್ನು ನೀಡಿದ್ದರು. ಆ ಸಂಖ್ಯೆಗೆ ಶನಿವಾರ ಕರೆ ಮಾಡಿದಾಗ ವಾಗ್ವಾದ ಆಗಿತ್ತು. ಅಲ್ಲದೇ ರಾಮ ಮಂದಿರ ಬಳಿ ಇದ್ದೇವೆ ಬಾ ಎಂದು ಕರೆದಿದ್ದರು.

Advertisement

ಅಲ್ಲಿಗೆ ಹೋದಾಗ ವಾಜಪೇಯಿ ಲೇಔಟ್‌ ಹತ್ತಿರವಿದ್ದೇವೆ ಬನ್ನಿ ಎಂದು ಸವಾಲು ಹಾಕಿದ್ದರು. ನಿಖಿಲ್ ಹಾಗೂ ಮನೆಯವರು ಅಲ್ಲಿಗೆ ಹೋಗಿದ್ದರು. ಇಲ್ಲದ್ದು ಹೇಳಿ ಹೀಗೆ ಮಾಡಬೇಡಿ ಎಂದು ತಿಳಿ ಹೇಳಿದರು. ಕೇಳದೇ ವಾಗ್ವಾದಕ್ಕಿಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕುಪಿತಗೊಂಡ ನಿಖೀಲ್‌ ಉದಯನಿಗೆ ಹೊಡೆದಿದ್ದ. ಆಗ ಆತ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಎಲ್ಲರ ಮೇಲೆ ದಾಳಿ ನಡೆಸಿದ. ದುಷ್ಕರ್ಮಿಗಳೆಲ್ಲರೂ ಸೇರಿಕೊಂಡು ನಡೆಸಿದ ದಾಳಿಯಲ್ಲಿ ಗಂಭೀರ ಗಾಯಗೊಂಡು ನಿಖಿಲ್‌ ಕೊನೆಯುಸಿ ರೆಳೆದಿದ್ದಾನೆ. ಉಳಿದ ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಡಿಸಿಪಿ ಕಿಶೋರಬಾಬು, ಎಸಿಪಿ ಜೆ.ಎಚ್‌.ಇನಾಮದಾರ, ಇನ್‌ಸ್ಪೆಕ್ಟರ್‌ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿತರ ಪತ್ತೆಗೆ ಜಾಲ ಬೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next