ಬೆಂಗಳೂರು: ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಪುತ್ರನೇ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆಗೈದಿರುವ ಅಮಾನವೀಯ ಘಟನೆ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಲಸಂದ್ರದ ಲುಕಾಸ್ ಲೇಔಟ್ ನಿವಾಸಿ ಫಾತೀಮಾ ಮೇರಿ (50) ಮೃತ ತಾಯಿ. ಕೃತ್ಯ ಎಸಗಿದ ಆಕೆಯ ಪುತ್ರ ದೀಪಕ್(26)ನನ್ನು ಬಂಧಿಸಲಾಗಿದೆ. ಜೂ.1 ರಂದು ಮೈಲಸಂದ್ರದ ಸಮೀಪದ ನೈಸ್ ರಸ್ತೆಪಕ್ಕದ ಜಮೀನಿನಲ್ಲಿ ಸೊಪ್ಪು ಕೊಯ್ಯುವಾಗ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧಫಾತೀಮಾ ಮೇರಿ ಪುತ್ರಿ ಜಾಯ್ಸ ಮೇರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಫಾತೀಮಾ ಮೇರಿ ಮೈಲಸಂದ್ರದ ಸುತ್ತ-ಮುತ್ತಲಿನ ಜಮೀನುಗಳಲ್ಲಿ ಸೊಪ್ಪು ಕೊಯ್ದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಜೂನ್ 1ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೈಸ್ ರಸ್ತೆಯ ಬಳಿಯ ಜಮೀನಿನಲ್ಲಿ ಸೊಪ್ಪು ಕೊಯ್ಯಲು ಹೋಗಿ ದ್ದಾರೆ. ಮಧ್ಯಾಹ್ನ 12 ಗಂಟೆಗೆ ಸ್ಥಳಕ್ಕೆ ಬಂದ ಪುತ್ರ ದೀಪಕ್ ಮೊಬೈಲ್ ಕೊಡಿಸುವಂತೆ ತಾಯಿಯನ್ನು ಕೇಳಿದ್ದಾನೆ.
ಆಗ ತಾಯಿ ಫಾತೀಮಾ ಮೇರಿ, ಮೊಬೈಲ್ ಕೊಡಿಸುವಷ್ಟು ಹಣ ತನ್ನ ಬಳಿ ಇಲ್ಲ ಎಂದಿದ್ದಾರೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಆರೋಪಿ, ತಾಯಿ ಧರಿಸಿದ್ದ ಸೀರೆಯನ್ನು ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ತಾಯಿ ಬಳಿಯಿದ್ದ 700 ರೂ. ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಕಥೆ ಕಟ್ಟಿದ್ದ: ಕೃತ್ಯ ಎಸಗಿದ ಬಳಿಕ ಮನೆಗೆ ತೆರಳಿದ ಆರೋಪಿ, ತಾಯಿ ಸ್ಥಳದಲ್ಲಿ ಕಾಣಿ ಸುತ್ತಿಲ್ಲ ಎಂದು ತಂದೆ ಮತ್ತು ಸಹೋದರಿಗೆ ಸುಳ್ಳು ಹೇಳಿದ್ದಾನೆ. ಬಳಿಕ ಮೂವರು ಎಲ್ಲೆಡೆ ಹುಡುಕಾಟ ನಡೆಸಲು ಹೋಗಿದ್ದಾರೆ. ಕೆಲ ಹೊತ್ತಿನ ಬಳಿಕ ಆರೋಪಿ, ತಂದೆಗೆ ಕರೆ ಮಾಡಿ, ನೈಸ್ ರಸ್ತೆ ಬಳಿಯ ಜಮೀನಿನಲ್ಲಿ ತಾಯಿ ಕುಸಿದು ಬಿದ್ದಿದ್ದಾಳೆ ಎಂದು ನಾಟಕವಾಡಿದ್ದ. ಈ ಸಂಬಂಧ ಜಾಯ್ಸ ಮೇರಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ವೇಳೆ ಪುತ್ರನ ಬಗ್ಗೆ ಅನುಮಾನ ಮೂಡಿದ್ದು, ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು