ಬೆಂಗಳೂರು: ಹೊರಗಡೆ ಸುತ್ತಾಡಲು ಜತೆಯಲ್ಲಿ ಬರಲಿಲ್ಲ ಎಂಬ ಕಾರಣಕ್ಕೆ ಭಾವಿ ಪತಿ ನಿಂದಿಸಿದರು ಎಂದು ನೊಂದಿದ್ದ ಕಾನೂನು ವಿದ್ಯಾರ್ಥಿನಿ ಕಾಲೇಜಿನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿ.ವಿ.ಪುರಂ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಬನಶಂಕರಿ ನಿವಾಸಿ ವೀಣಾ (23) ಮೃತ ವಿದ್ಯಾರ್ಥಿನಿ. ವಿ.ವಿ.ಪುರಂನ ಎಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ ವೀಣಾ, ಸೋಮವಾರ ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಬಂದಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಲೇಜಿನ 7ನೇ ಮಹಡಿಗೆ ತೆರಳಿ ಏಕಾಏಕಿ ಕೆಳಗೆ ಜಿಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೀಣಾರನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಒಂದು ತಿಂಗಳ ಹಿಂದಷ್ಟೇ ವೀಣಾ ಮತ್ತು ಖಾಸಗಿ ಕಂಪನಿ ಉದ್ಯೋಗಿ ಚಂದ್ರಶೇಖರ್ ಜತೆ ವಿವಾಹ ನಿಶ್ಚಿತಾರ್ಥವಾಗಿತ್ತು. ಹೀಗಾಗಿ ಭಾವಿ ಪತಿ ಚಂದ್ರಶೇಖರ್ ರಜೆ ದಿನಗಳು ಹೊರಗಡೆ ಸುತ್ತಾಡಲು ಬರುವಂತೆ ವೀಣಾರನ್ನು ಕರೆಯುತ್ತಿದ್ದರು. ಆದರೆ, ಆಕೆ ವಿವಾಹವಾಗುವವರೆಗೂ ಎಲ್ಲಿಗೂ ಬರುವುದಿಲ್ಲ ಎಂದಿದ್ದರು.
ಭಾನುವಾರ ರಜೆ ಇದ್ದ ಕಾರಣ ಸುತ್ತಾಡಲು ಬರುವಂತೆ ಮತ್ತೂಮ್ಮೆ ವೀಣಾರನ್ನು ಕೋರಿದ್ದಾರೆ. ಆಕೆ ನಿರಾಕರಿಸಿದ್ದರು. ಅದರಿಂದ ಕೋಪಗೊಂಡ ಚಂದ್ರಶೇಖರ್, ವೀಣಾ ಮನೆ ಬಳಿ ಬಂದು ಗಲಾಟೆ ಮಾಡಿದ್ದರು ಎಂದು ಹೇಳಲಾಗಿದೆ. ಅದೇ ವಿಚಾರಕ್ಕೆ ನೊಂದಿದ್ದ ವೀಣಾ, ಡೆತ್ ನೋಟ್ ಬರೆದಿಟ್ಟು ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಭಾವಿ ಅಳಿಯ ಚಂದ್ರಶೇಖ ರ್ ವಿರುದ್ಧ ವೀಣಾ ಪೋಷಕರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.