ಬೆಂಗಳೂರು: ಸಾಲ ತೀರಿಸಲಾಗದೆ ಮನನೊಂದು ಒಂದೇ ಕುಟುಂಬದ ಮೂವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಎಚ್ ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ.
ಕೇರಳ ಮೂಲದ ಎಚ್‌ಎಸ್ ಆರ್ ಲೇಔಟ್ 3ನೇ ಹಂತದ ನಿವಾಸಿ ಸಂತೋಷ್ ಕುಮಾರ್(54), ಇವರ ಪತ್ನಿ ಒಮಾನ್ ಸಂತೋಷ್(50) ಹಾಗೂ ಪುತ್ರಿ ಸಾನುಷಾ ಸಂತೋಷ್(17) ಆತ್ಮಹತ್ಯೆಗೆ ಶರಣಾ ದವರು.
ಶುಕ್ರವಾರ ಮುಂಜಾನೆ 5.30ಕ್ಕೆ ಸಂತೋಷ್ ಕುಮಾರ್ ಮನೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದರೂ ಒಳಗಿನಿಂದ ಲಾಕ್ ಆಗಿದ್ದರಿಂದ ಸಾಧ್ಯವಾಗಿರಲಿಲ್ಲ. ಆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ಒಳ ಪ್ರವೇಶಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ನಂದಿಸಿದ ಬಳಿಕ ಪರಿಶೀಲಿಸಿದಾಗ ಇಡೀ ಮನೆಗೆ ಹಾಗೂ ಮೂವರು ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿರುವುದು ಗೊತ್ತಾಗಿದೆ. ಮನೆ ಪೂರ್ತಿ ಬೆಂಕಿ ಆವರಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೂವರು ಸಜೀವ ದಹನವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಲ ತೀರಿಸಲಾಗದೇ ಆತ್ಮಹತ್ಯೆ: ಸಂತೋಷ್ ಕುಮಾರ್ ನಗರದಲ್ಲಿ ಬಿಡಿ ಭಾಗಗಳ ಉತ್ಪಾದನಾ ಕಾರ್ಖಾನೆ ನಡೆಸುತ್ತಿದ್ದರು. ಕಳೆದ 20 ವರ್ಷಗಳಿಂದ ಕುಟುಂಬಸ್ಥರ ಜತೆಗೆ ನಗರದಲ್ಲೇ ನೆಲೆಸಿದ್ದರು. ಕಾರ್ಖಾನೆ ನಡೆಸಲು ಸಾಲ ಮಾಡಿರುವ ಸಾಧ್ಯತೆಗಳಿದ್ದು, ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕೇರಳದಲ್ಲಿರುವ ಸಂತೋಷ್ ಕುಟುಂಬದವರಿಗೆ ಪ್ರಕರಣದ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮುಂದಿನ ಪ್ರಕ್ರೀಯೆ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.