ಅಜಂಗಢ: ಶ್ರದ್ಧಾ ಕೊಲೆ ರೀತಿಯಲ್ಲಿ ಉತ್ತರ ಪ್ರದೇಶದ ಅಜಂಗಢದಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರಿಯತಮೆಯನ್ನು ಹತ್ಯೆ ಮಾಡಿ, ಅರು ತುಂಡುಗಳಾಗಿ ಕತ್ತರಿಸಿ, ಬಾವಿಗೆ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ.
ಆರಾಧನ ಮೃತ ಮಹಿಳೆ. ಆರೋಪಿ ಪ್ರಿನ್ಸ್ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆರಾಧನಾ ಮತ್ತು ಪ್ರಿನ್ಸ್ ಈ ಹಿಂದೆ ಪ್ರೀತಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಬೇರೆ ಯುವತಿಯೊಂದಿಗೆ ಪ್ರಿನ್ಸ್ ಮದುವೆಯಾಗಿದ್ದ. ಆರಾಧನಾ ಕೂಡ ಬೇರೊಬ್ಬನ ಜತೆಗೆ ಮದುವೆಯಾಗಿತ್ತು. ಇದನ್ನು ಸಹಿಸದ ಪ್ರಿನ್ಸ್, ಆಕೆಯನ್ನು ದೇವಸ್ಥಾನಕ್ಕೆ ಹೋಗೋಣ ಎಂದು ನೆಪ ಹೇಳಿ ಕರೆದಿದ್ದಾನೆ. ನಂತರ ನ.9ರಂದು ತನ್ನ ಸಂಬಂಧಿ ಜತೆ ಸೇರಿಕೊಂಡು ಆಕೆಯನ್ನು ಕೊಲೆ ಮಾಡಿ, ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಸಮೀಪದ ಬಾವಿಗೆ ಎಸೆದಿದ್ದಾರೆ. ಅಲ್ಲದೇ ತಲೆಯ ಭಾಗವನ್ನು ಸಮೀಪದ ಕರೆಗೆ ಎಸೆದು ಹೋಗಿದ್ದಾರೆ.
ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಸ್ಥಳ ಮಹಜರಿಗೆ ಭಾನುವಾರ ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಪ್ರಿನ್ಸ್ ಪರಾರಿಯಾಗಲು ಪ್ರಯತ್ನಿಸಿದ್ದು, ಅವನನ್ನು ಗುಂಡು ಹಾರಿಸಿ ಬಂಧಿಸಿದ್ದಾರೆ.
ಸುಳ್ಳು ಪತ್ತೆ ಪರೀಕ್ಷೆ: ಇಂದು ವಿಚಾರಣೆ:
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ದೆಹಲಿ ನ್ಯಾಯಾಲಯಕ್ಕೆ ಸೋಮವಾರ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಅರ್ಜಿಯು ದೆಹಲಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಜಯಶ್ರೀ ರಾಥೋಡ್ ಎದುರು ಮಂಗಳವಾರ ವಿಚಾರಣೆಗೆ ಬರಲಿದೆ. ಆರೋಪಿ ಅಫ್ತಾಬ್ ವಿಚಾರಣಾ ಸಂಸ್ಥೆಯ ದಿಕ್ಕು ತಪ್ಪಿಸುತ್ತಿದ್ದಾನೆ. ಹಾಗಾಗಿ ಪೊಲೀಸ್ ವಿಚಾರಣೆ ಸಮಯದಲ್ಲಿ ಆರೋಪಿ ಹೇಳುತ್ತಿರುವುದು ಸತ್ಯವೋ ಅಥವಾ ಸುಳ್ಳು ಎಂಬುದನ್ನು ಪತ್ತೆಹಚ್ಚಲು ಸುಳ್ಳು ಪತ್ತೆ ಪರೀಕ್ಷೆ ನಡೆಸುವುದು ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ಸಲ್ಲಿಸರುವ ಅರ್ಜಿಯಲ್ಲಿ ಉಲ್ಲೇಖೀಸಲಾಗಿದೆ.