ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದ್ದರೂ, ದಂಡ ವಸೂಲಿ ಮಾಡುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದುವರೆಗೆ ಸರಿ ಸುಮಾರು 1.50 ಕೋಟಿ ಪ್ರಕರಣಗಳಲ್ಲಿ ಬರೊಬ್ಬರಿ 934 ಕೋಟಿ ರೂ. ದಂಡ ಸಂಗ್ರಹಿಸಲು ಬಾಕಿ ಇದೆ ! ಚುನಾವಣೆ ಸಮರ ಮುಗಿದ ಬೆನ್ನಲ್ಲೇ ಇದೀಗ ದಂಡ ಪಾವತಿಸದ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಂಚಾರ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ನಿತ್ಯ 1.9 ಕೋಟಿ ವಾಹನಗಳು ರಸ್ತೆಗಿಳಿಯುತ್ತಿದ್ದು, ಸಂಚಾರ ನಿರ್ವಹಣೆ ಮಾಡುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇದೆಲ್ಲದರ ನಡುವೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡುವಲ್ಲಿ ಸಂಚಾರ ಪೊಲೀಸ್ ವಿಭಾಗ ವಿಫಲವಾಗಿದ್ದು, ಇನ್ನೂ 934 ಕೋಟಿ ರೂ. ದಂಡ ಸಂಗ್ರಹಿಸಲು ಬಾಕಿ ಉಳಿಸಿಕೊಂಡಿರುವುದು ಸಂಚಾರ ಪೊಲೀಸರ ವೈಫಲ್ಯತೆ ತೋರಿಸುತ್ತದೆ. ಇದನ್ನು ಮನಗಂಡ ನ್ಯಾಯಾಲಯವು ಇತ್ತೀಚೆಗೆ ಅರ್ಧ ದಂಡ ಪಾವತಿಗೆ ಅವಕಾಶ ಕೊಟ್ಟಿತ್ತು. ಇಷ್ಟಾದರೂ ಬಹುತೇಕ ವಾಹನ ಸವಾರರು ದಂಡ ಕಟ್ಟಲು ಹಿಂದೇಟು ಹಾಕಿದ್ದಾರೆ. ಆ ಸಂದರ್ಭದಲ್ಲಿ ಒಟ್ಟಾರೆ ಸುಮಾರು 130 ಕೋಟಿ ರೂ. ದಂಡ ಸಂಗ್ರಹವಾಗಿದೆ. ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ನಗರದ ಹಲವು ರಸ್ತೆಗಳಲ್ಲಿ ವಾಹನ ಸವಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ಬಾಕಿ ದಂಡ ಸಂಗ್ರಹ ಗಂಭೀರವಾಗಿ ಪರಿಗಣಿಸಿರುವ ಸಂಚಾರ ವಿಭಾಗದ ಪೊಲೀಸರು ದಂಡ ವಸೂಲಿಗೆ ಹೊಸ ಅಸ್ತ್ರ ಬಳಸಲು ಪೂರ್ವ ತಯಾರಿ ನಡೆಸಿದ್ದಾರೆ. ಈ ಕಾರ್ಯ ವಿಧಾನವನ್ನು ಕೆಲ ದಿನಗಳಲ್ಲೇ ಬಹಿರಂಗಪಡಿಸುವುದಾಗಿ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ “ಉದಯವಾಣಿ’ಗೆ ತಿಳಿಸಿದ್ದಾರೆ.
ಇನ್ಶೂರೆನ್ಸ್ ನವೀಕರಣದ ವೇಳೆ ದಂಡ ವಸೂಲಿ: ಈಗಾಗಲೇ ಇನ್ಶೂರೆನ್ಸ್ ಕಂಪನಿ ಜತೆಗೆ ಈ ಬಗ್ಗೆ ಸಂಚಾರ ವಿಭಾಗದ ಪೊಲೀಸರು ಸಭೆ ನಡೆಸಿ ಚರ್ಚಿಸಿದ್ದಾರೆ. ಅದರಂತೆ ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಸಂಚಾರ ಪೊಲೀಸರಿಂದ ಎನ್‌ಒಸಿ ಪಡೆಯಬೇಕು. ಹಳದಿ ನಂಬರ್ ಪ್ಲೇಟ್ ಹಾಗೂ ಬಿಳಿ ನಂಬರ್ ಪ್ಲೇಟ್‌ಗಳ ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ವಿಮೆ ಮಾಡಿಸಲು ಹೋಗುವ ವೇಳೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡವನ್ನೂ ವಸೂಲಿ ಮಾಡಲು ಚಿಂತನೆ ನಡೆಸಲಾಗಿದೆ. ಎನ್‌ಒಸಿ ಪಡೆಯದ ವಾಹನಗಳ ಇನ್ಶೂರೆನ್ಸ್ ನವೀಕರಣವಾಗದಂತೆ ಮಾಡಲು ತಾಂತ್ರಿಕವಾಗಿ ಸಿದ್ಧತೆಗಳು ನಡೆಯುತ್ತಿವೆ.
ಸಂಚಾರ ನಿಯಮ ಉಲ್ಲಂಘಿಸುವುದನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯು ಸುಧಾರಿತ ತಂತ್ರಜ್ಞಾನದ ಮೊರೆ ಹೋಗಿದೆ. ಅದರಂತೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಷಿಯಲ್ ಇಂಟೆಲಿಜೆನ್ಸ್), ಮಷಿನ್ ಲರ್ನಿಂಗ್ ತಂತ್ರಜ್ಞಾನ ಹೊಂದಿರುವ ಕ್ಯಾಮರಾ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದಂತೆ ವಾಹನ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಇ-ಚಲನ್ ರವಾನೆಯಾಗಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ 260 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಸೆರೆಹಿಡಿಯುವ ಕ್ಯಾಮೆರಾ, ರೆಡ್‌ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮೆರಾಗಳನ್ನು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ. 24 ಗಂಟೆಯೂ ಇದು ಕಾರ್ಯ ನಿರ್ವಹಿಸಲಿದೆ. 5 ಸೆಕೆಂಡ್‌ಗಳಲ್ಲೇ ವಿಡಿಯೋದ ಜತೆಗೆ ದಂಡದ ನೋಟಿಸ್ ಸಹ ಬರಲಿದೆ. ಮೊಬೈಲ್‌ನಲ್ಲೇ ಕ್ಯೂಆರ್ ಕೋಡ್ ಮೂಲಕ ದಂಡ ಪಾವತಿಸಬಹುದು.
ಪ್ರತಿನಿತ್ಯ 30 ಸಾವಿರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಪ್ರತಿ ದಿನ ಸುಮಾರು 30 ಸಾವಿರಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತವೆ. 2022-23ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ 8.2 ಲಕ್ಷ ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಹೊಸದಾಗಿ ಸೇರ್ಪಡೆಯಾಗಿವೆ. ಕಳೆದ 3 ತಿಂಗಳಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡಿದ 10,50,958 ಕೇಸ್ ದಾಖಲಾದರೆ, ಸೇಫ್ಟಿ ಬೆಲ್ಟ್ ಧರಿಸದ 2,08,303, ರಾಂಗ್ ಪಾರ್ಕಿಂಗ್ 2,91,899, ಸಿಗ್ನಲ್ ಜಂಪ್ 2,32,626 ಕೇಸ್ ದಾಖಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಸಂಗ್ರಹಿಸಲು ಸಂಚಾರ ವಿಭಾಗವು ಹೊಸ ತಂತ್ರ ರೂಪಿಸಿದೆ. ಚುನಾವಣೆ ಬಳಿಕ ಇದನ್ನು ಕಾರ್ಯ ರೂಪಕ್ಕೆ ತರಲಾಗುವುದು. ವಾಹನ ಸವಾರರು ಸಂಚಾರ ನಿಯಮ ಪಾಲನೆ ಬಗ್ಗೆ ಗಮನಹರಿಸಬೇಕು. –
ಡಾ.ಎಂ.ಎ.ಸಲೀಂ, ವಿಶೇಷ ಪೊಲೀಸ್ ಆಯುಕ್ತ, ಬೆಂ.ಸಂಚಾರ ಪೊಲೀಸ್ ವಿಭಾಗ.
-ಅವಿನಾಶ ಮೂಡಂಬಿಕಾನ