Advertisement
ನಿಲುಗಡೆ ನಿಷೇಧಿಸಿರುವ ಸ್ಥಳದಲ್ಲಿ (ನೋಪಾರ್ಕಿಂಗ್) ವಾಹನಗಳ ನಿಲ್ಲಿಸಿದರೆ ಪ್ರಸ್ತುತ ನೂರು ರೂ. ದಂಡ ಇದೆ. ಇದನ್ನು ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಇನ್ಷೊರನ್ಸ್ ಇಲ್ಲದೆ ರಸ್ತೆಗಿಳಿದ ವಾಹನಗಳಿಗೆ ಕ್ರಮವಾಗಿ ಸಾವಿರ ರೂ.ಹಾಗೂ ಅರ್ಹತಾ ಪ್ರಮಾಣಪತ್ರ ಇಲ್ಲದೆ ಸಂಚರಿಸುವ ಎಲ್ಲ ಪ್ರಕಾರದ ವಾಹನಗಳಿಗೆ ಎರಡರಿಂದ ಐದು ಸಾವಿರ ರೂ.ವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಮೋಟಾರು ವಾಹನ ಕಾಯ್ದೆ-1988 ಕಲಂ 200ಕ್ಕೆ ತಿದ್ದುಪಡಿ ತರಲಾಗಿದ್ದು, ಕಾಯ್ದೆಯಲ್ಲಿ ಕೋಷ್ಠಕ 1 (ಮೋಟಾರು ವಾಹನಗಳ ಇನ್‌ಸ್ಪೆಕ್ಟರ್) ಮತ್ತು 2 (ಪೊಲೀಸ್ ಇಲಾಖೆಯ ಸಂಚಾರ ಸಬ್ ಇನ್‌ಸ್ಪೆಕ್ಟರ್ ವ್ಯಾಪ್ತಿ) ಸೇರಿದಂತೆ 43ಕ್ಕೂ ಹೆಚ್ಚು ಸಂಚಾರ ನಿಯಮಗಳ ಉಲ್ಲಂಘನೆ ಅಪರಾಧಗಳನ್ನು ಪಟ್ಟಿಮಾಡಲಾಗಿದೆ.
Related Articles
Advertisement
ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಿದ್ದ ಪೊಲೀಸರು
ರಾಜ್ಯದಲ್ಲಿ ಪ್ರಸ್ತುತ ಸಂಚಾರ ನಿಯಮಗಳಿದ್ದರೂ ಉಲ್ಲಂಘನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚು ತ್ತಲೇ ಇದೆ. ಅದರಲ್ಲೂ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಸಿಗ್ನಲ್ ಜಂಪ್, ನಿಷೇಧಿತ ಪ್ರದೇಶದಲ್ಲಿ ವಾಹನಗಳ ನಿಲುಗಡೆ, ಅರ್ಹತಾ ಪ್ರಮಾಣಪತ್ರ ಇಲ್ಲದೆ ವಾಹನ ಚಾಲನೆ ಸೇರಿದಂತೆ ನಿರ್ದಿಷ್ಟ ನಿಯಮಗಳ ಉಲ್ಲಂಘನೆ ಪ್ರಮಾಣ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಮಟ್ಟದ ದಂಡ ಪ್ರಯೋಗ ಮಾಡಿ, ಉಲ್ಲಂಘನೆಗಳಿಗೆ ಕಡಿ ವಾಣ ಹಾಕುವ ಅವಶ್ಯಕತೆ ಇದೆ. ಇದರಿಂದ ಸಾಧ್ಯವಾದಷ್ಟು ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗಲಿವೆ. ಇದು ತೆಲಂಗಾಣದಲ್ಲಿ ಫಲ ನೀಡಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ, ದಂಡದ ಮೊತ್ತ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಸಮ್ಮತಿಸಿದೆ.
ದಂಡ ಹೆಚ್ಚಳದ ಬಿಸಿ ಬೆಂಗಳೂರಿಗೇ ಹೆಚ್ಚು ಅಂದಹಾಗೆ, ಈ ಮೊದಲು 2007-08ರಲ್ಲಿ ವಾಹನಗಳಿಗೆ ಸಂಬಂಧಿಸಿದ ದಂಡವನ್ನು ಪರಿಷ್ಕರಿಸಲಾಗಿತ್ತು. ಹೆಚ್ಚು-ಕಡಿಮೆ ದಶಕದ ನಂತರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇಡೀ ರಾಜ್ಯಕ್ಕೆ ಪರಿಷ್ಕೃತ ನಿಯಮ ಅನ್ವಯ ಆಗಲಿದ್ದರೂ, ಇದರ ಬಿಸಿ ಹೆಚ್ಚಾಗಿ ಬೆಂಗಳೂರು ನಿವಾಸಿಗಳಿಗೇ ತಟ್ಟಲಿದೆ. ಏಕೆಂದರೆ, ಒಟ್ಟಾರೆ ವಾಹನಗಳ ಪೈಕಿ ಶೇ.40ರಷ್ಟು ನಗರದಲ್ಲಿವೆ. ನಿರ್ಬಂಧಿತ ಜಾಗದಲ್ಲಿ ನಿಲುಗಡೆ, ಸಿಗ್ನಲ್ ಜಂಪ್‌ನಂತಹ ಸಂಚಾರ ನಿಯಮಗಳ ಉಲ್ಲಂಘನೆ ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಕೂಡ ಇಲ್ಲಿಯೇ. ಪೊಲೀಸ್ ಇಲಾಖೆ ಕೂಡ ನಗರವನ್ನು ಗಮನದಲ್ಲಿಟ್ಟುಕೊಂಡೇ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಮೂಲಗಳು ತಿಳಿಸಿವೆ.
ವಿಜಯಕುಮಾರ್ ಚಂದರಗಿ