Advertisement

ಸಂಚಾರ ನಿಯಮ ಉಲ್ಲಂಘನೆ: ರಾಜ್ಯದಲ್ಲಿ3 ವರ್ಷದಲ್ಲಿ 660 ಕೋಟಿ ರೂ. ಸಂಗ್ರಹ

06:53 PM Mar 17, 2022 | Team Udayavani |

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಈ ಪ್ರಕರಣಗಳಿಂದ ಕಳೆದ ಮೂರು ವರ್ಷದಲ್ಲಿ  660 ಕೋಟಿ 97 ಲಕ್ಷದ 96,854 ರೂ. ದಂಡ ಸಂಗ್ರಹಿಸಲಾಗಿದೆ.

Advertisement

ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾದ ದಂಡದ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಪ್ರಕರಣಗಳಿಂದ ಸಂಗ್ರಹಿಸಲಾದ ಸ್ಥಳದಂಡ ಮೊತ್ತವನ್ನು ಸರ್ಕಾರದ ಖಜಾನೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಸಂಚಾರ ಸುಧಾರಣೆಗಾಗಿ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆ ಮಾಡುವ ಸದರಿ ಅನುದಾನದಲ್ಲಿ ಈ ಕೆಳಕಂಡ ಯೋಜನೆಯ ಉದ್ದೇಶಗಳಿಗಾಗಿ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತದೆ.

1. ಸಿಗ್ನಲ್ ಲೈಟ್ಸ್, ಸಿ.ಸಿ, ಕ್ಯಾಮೆರ, ಹೆದ್ದಾರಿ ಗಸ್ತು ವಾಹನ, ಇಂಟರ್‌ಸೆಪ್ಟರ್‌ ವಾಹನ, ಪಿ.ಡಿ.ಎ ಡಿವೈಸ್‌ಗಳ ವಾರ್ಷಿಕ ನಿರ್ವಹಣೆಗಾಗಿ.
2.ಹೆದ್ದಾರಿ ಗಸ್ತು ವಾಹನ ಯೋಜನೆಯಡಿಯಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಹೆದ್ದಾರಿ ಗಸ್ತು ವಾಹನಗಳನ್ನು ಖರೀದಿಸಲು.
3.ಹೆದ್ದಾರಿಗಳಲ್ಲಿ/ಇನ್ನಿತರೆ ರಸ್ತೆಗಳಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುವವರ ವಿರುದ್ಧ ಇಂಟರ್‌ಸೆಪ್ಟರ್‌ ವಾಹನಗಳ ಮೂಲಕ ಪ್ರಕರಣಗಳನ್ನು ದಾಖಲಿಸಲು ಇಂಟರ್‌ಸೆಪ್ಟರ್‌ ವಾಹನಗಳನ್ನು ಖರೀದಿಸಲು.
4.ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪಿ.ಡಿ.ಎ ಡಿವೈಸ್ ಮಷಿನ್‌ಗಳನ್ನು ಖರೀದಿಸಲು.
5.ಸಂಚಾರ ಉಪಕರಣಗಳನ್ನು ಖರೀದಿಸುವ ಸಲುವಾಗಿ.
6.ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ, ವಾಹನ ಚಾಲಕರುಗಳಿಗೆ, ಸಂಚಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಗಳನ್ನು ಆಚರಿಸಲು.
7. ಬ್ಲಾಕ್ ಸ್ಪಾಟ್ ಆಟೋಮೇಟೆಡ್ ಟ್ರಾಫಿಕ್ ಸೇಫ್ಟಿ ಎನ್‌ಫೋರ್ಸ್‌ಮೆಂಟ್ ಅನುಷ್ಠಾನಗೊಳಿಸಲು.
8.ಅಡಪ್ಟೀವ್/ಸಿಂಗ್ರನೈಸ್ ಸಿಗ್ನಲ್ ವಿತ್ ರೆಡ್ ಲೈಟ್ ವಯಲೇಷನ್ (RLVD) ಅನ್ನು ಅನುಷ್ಠಾನಗೊಳಿಸಲು.
9.120 ಸ್ಥಳಗಳಲ್ಲಿ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್‌ನೇಷನ್(ANPR) ಇಂಟಲಿಜೆಂಟ್ ರೆಕಗ್‌ನೇಷನ್ ಸಿಸ್ಟಂ ಆನ್‌ ಹೈಡೆನ್‌ಸಿಟಿ ಕಾರಿಡಾರ್‌ ಅನ್ನು ಅನುಷ್ಠಾನಗೊಳಿಸಲು.
10.ಸಂಚಾರ ಸುಧಾರಣೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು.
11.ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ, ಭಾರತ ಸರ್ಕಾರದ ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ದೆಶನಗಳನ್ನು ಅನುಷ್ಠಾನಗೊಳಿಸಲು.

ಮೂರು ವರ್ಷದಲ್ಲಿ ಬಳಕೆ ಮಾಡಲಾದ ವಿವರಗಳ ಬಗ್ಗೆ ಕೇಳಲಾದ ಪ್ರಶ್ನೆಗೆ 2018-19ರಲ್ಲಿ ಬಿಡುಗಡೆ ಮಾಡಲಾದ ಅನುದಾನವು 2.46 ಕೋಟಿ ರೂ. ಆಗಿದ್ದರೆ, 2 ಕೋಟಿ 40 ಲಕ್ಷದ 87,522 ರೂಪಾಯಿಯನ್ನು ವೆಚ್ಚ ಮಾಡಲಾಗಿದೆ. 5,12,478 ರೂಪಾಯಿಯನ್ನು ಅಧ್ಯರ್ಪಣೆ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಅಲ್ಲದೆ ಟಿಪ್ಪಣಿಯೊಂದನ್ನು ನೀಡಿದ್ದು, 2020-21ನೇ ಸಾಲಿನಲ್ಲಿ ಬಿಡುಗಡೆ ಮಾಡಲಾದ ಒಟ್ಟು ಅನುದಾನದಲ್ಲಿ ಬಾಕಿ ಉಳಿದಿರುವ ಅನುದಾನ ರೂ.19,73,11,868/- ಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸರ್ಕಾರದ ಆದೇಶ ಸಂಖ್ಯೆ:ಟಿಡಿ 137 ಟಿಡಿಓ 2020, ದಿನಾಂಕ: 08.03.2021ರ ಪ್ರಕಾರ ಕೆ.ಆರ್‌.ಡಿ.ಸಿ.ಎಲ್. ಸಂಸ್ಥೆಯಲ್ಲಿ ಠೇವಣಿಯನ್ನಾಗಿಟ್ಟು ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿರುತ್ತಾರೆ ಎಂದು ಸಹ ಗೃಹ ಸಚಿವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next