Advertisement

ಸಂಚಾರ ನಿಯಮ ಉಲ್ಲಂಘನೆ ಸಾವಿರಾರು ನೋಟಿಸ್‌ ವಾಪಸ್‌ !

07:22 PM Jan 23, 2022 | Team Udayavani |

ಮಹಾನಗರ: ಸಂಚಾರ ನಿಯಮ ಉಲ್ಲಂ ಸಿದ ವಾಹನಗಳ ಮಾಲಕರಿಗೆ ಪೊಲೀಸರು ಅಂಚೆ ಮೂಲಕ ಕಳುಹಿಸಿರುವ ನೋಟಿಸ್‌ಗಳ ಪೈಕಿ ಸಾವಿರಾರು ನೋಟಿಸ್‌ಗಳು ವಿಳಾಸ ಪತ್ತೆಯಾಗದೆ ವಾಪಸಾಗುತ್ತಿದ್ದು ಇದೀಗ ವಾಹನ ಮಾಲಕರ ಪತ್ತೆಗೆ ಸ್ಥಳೀಯ ಪೊಲೀಸ್‌ ಠಾಣೆಯ ನೆರವಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ!
ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಸಿಸಿ ಕೆಮರಾಗಳ ಫ‌ೂಟೇಜ್‌, ಪೊಲೀ ಸರ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಫೋಟೋ, ವೀಡಿಯೋ ಆಧರಿಸಿ ಆಟೋಮೇಷನ್‌ ಸೆಂಟರ್‌ ಮೂಲಕ ಸಂಬಂಧಿಸಿದ ವಾಹನ ಮಾಲಕರಿಗೆ ನೋಟಿಸ್‌ ಕಳುಹಿಸಲಾಗುತ್ತಿದೆ. ಈ ರೀತಿ ಕಳುಹಿಸಿರುವ ನೋಟಿಸ್‌ಗಳ ಪೈಕಿ ಸಾವಿರಾರು ನೋಟಿಸ್‌ಗಳು ವಾಪಸ್‌ ಪೊಲೀಸ್‌ ಅಧಿಕಾರಿಗಳ ಕಚೇರಿಗೆ ಬಂದು ರಾಶಿಬಿದ್ದಿದ್ದು ಇವುಗಳನ್ನು ಸಂಬಂಧಿಸಿದವರಿಗೆ ತಲುಪಿಸಲು ಪೊಲೀಸರು ಬೇರೆ ಬೇರೆ ದಾರಿಗಳನ್ನು ಅನುಸರಿಸುತ್ತಿದ್ದಾರೆ.

Advertisement

23,000 ನೋಟಿಸ್‌ಗಳು ವಾಪಸ್‌ !
2017ರಿಂದ ಸುಮಾರು 23,000 ನೋಟಿಸ್‌ಗಳು ವಾಪಸ್‌ ಬಂದಿವೆ. ಈ ಪೈಕಿ ಇತ್ತೀಚೆಗೆ ಸುಮಾರು 12,000 ನೋಟಿಸ್‌ಗಳನ್ನು ಪೊಲೀಸರು ಸಂಬಂಧಿಸಿದವರಿಗೆ ಮುಟ್ಟಿಸಿ ದಂಡ ವಸೂಲಿ ಮಾಡಿದ್ದಾರೆ. ಕಳೆದೆರಡು ತಿಂಗಳಲ್ಲಿ ಸುಮಾರು 2,000 ನೋಟಿಸ್‌ಗಳು ವಾಪಸ್‌ ಬಂದಿವೆ. ಹೆಚ್ಚಾಗಿ ದ್ವಿಚಕ್ರ ವಾಹನಗಳ ಮಾಲಕರ ವಿಳಾಸ ಪತ್ತೆಯಾಗದಿರುವುದು ಕಂಡುಬಂದಿದೆ. ನಗರ ಮತ್ತು ನಗರದ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಹನದ ಮಾಲಕರು ಬಾಡಿಗೆ ಮನೆ, ಫ್ಲ್ಯಾಟ್‌ಗಳನ್ನು ಬದಲಾಯಿಸಿರುವುದರಿಂದ ವಿಳಾಸ ಬದಲಾಗಿದೆ. ಇನ್ನು ಕೆಲವು ಮಂದಿ ನೋಟಿಸ್‌ ತೆಗೆದುಕೊಂಡಿಲ್ಲ. ಈ ಕಾರಣದಿಂದ ನೋಟಿಸ್‌ಗಳು ವಾಪಸ್‌ ಬಂದಿರುವ ಸಾಧ್ಯತೆ ಇದೆ. ಬೇರೆ ಕಾರಣಗಳಿದ್ದರೆ ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ಠಾಣಾವಾರು ಪತ್ತೆಗೆ ಕ್ರಮ
ಪೊಲೀಸರು ತಂತ್ರಜ್ಞಾನ ಬಳಸಿ ವಾಹನಗಳ ಮಾಲಕರ ಮೊಬೈಲ್‌ ಸಂಖ್ಯೆ ಸಂಗ್ರಹಿಸಿ ಅವರಿಗೆ ಕರೆ ಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ. ಜತೆಗೆ ಸ್ಥಳೀಯ ಪೊಲೀಸ್‌ ಠಾಣೆಯ ಸಿಬಂದಿ ವಾಹನಗಳ ಮಾಲಕರ ಮಾಹಿತಿ ಸಂಗ್ರಹಿಸಿ ದಂಡ ವಸೂಲಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ. 8-10 ಕೇಸ್‌ ಆಗಿ ನೋಟಿಸ್‌ ಕಳುಹಿಸಿ ಪೋನ್‌ ಮಾಡಿ ತಿಳಿಸಿದರೂ ದಂಡ ಕಟ್ಟದವರನ್ನು ಬ್ಲ್ಯಾಕ್‌ಲಿಸ್ಟ್‌ಗೆ ಹಾಕುವ ಪ್ರಕ್ರಿಯೆ ನಡೆಸುತ್ತಿದ್ದಾರೆ.

38,000 ರೂ. ದಂಡ ಪಾವತಿ !
ಹಳೆಯ ಎಲ್ಲ ಕೇಸ್‌ಗಳ ಬಾಕಿಯನ್ನು ಕೂಡ ಪೊಲೀಸರು ವಸೂಲಿ ಮಾಡುತ್ತಿದ್ದು ಇತ್ತೀಚೆಗೆ ಓರ್ವ ಕಾರು ಮಾಲಕರಿಂದ ಹಲವು ಕೇಸ್‌ಗಳಿಗೆ ಸಂಬಂಧಿಸಿದಂತೆ ಎರಡು ಹಂತಗಳಲ್ಲಿ ಒಟ್ಟು 38,000 ರೂ. ದಂಡ ವಸೂಲಿ ಮಾಡಲಾಗಿದೆ. ಈ ಕಾರಿನ ಮಾಲಕರು ಟಿಂಟ್‌ ಗ್ಲಾಸ್‌ಗೆ ಸಂಬಂಧಿಸಿ ಹಲವು ಬಾರಿ ನಿಯಮ ಉಲ್ಲಂ ಸಿದ್ದರು. ಇತರ ಕೆಲವು ವಾಹನ ಸಂಚಾರ ನಿಯಮ ಉಲ್ಲಂಘನೆ ಕೇಸ್‌ ಕೂಡ ಆ ವಾಹನದ ಮೇಲಿತ್ತು ಎಂದು ಮೂಲಗಳು ತಿಳಿಸಿವೆ.

ತಪ್ಪಿಸಿಕೊಳ್ಳಲು ಬಿಡುವುದಿಲ್ಲ
ಈಗಾಗಲೇ ವಿಳಾಸ ಪತ್ತೆಯಾಗದೆ ವಾಪಸಾಗಿರುವ ನೋಟಿಸ್‌ಗಳನ್ನು ಸಂಬಂಧಿಸಿದ ವಾಹನಗಳ ಮಾಲಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ತಪ್ಪು ಮಾಡಿರುವವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಎಲ್ಲ ಸಂಚಾರಿ ಪೊಲೀಸ್‌ ಠಾಣೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಲ್ಲದೆ ನಮ್ಮ ಬಳಿ ಇರುವ ತಂತ್ರಜ್ಞಾನದಿಂದ ಮಾಲಕರನ್ನು ಪತ್ತೆ ಮಾಡುತ್ತಿದ್ದೇವೆ.
– ಎಂ.ಎ. ನಟರಾಜ್‌
ಎಸಿಪಿ, ಸಂಚಾರ ವಿಭಾಗ ಮಂಗಳೂರು

Advertisement

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next