Advertisement

ಕಾಫಿ ತೋಟದ ಮಣ್ಣು ಪರೀಕ್ಷೆಗೆ ಸಂಚಾರ ವಾಹನ

06:14 PM Apr 14, 2022 | Team Udayavani |

ಹಾಸನ: ಕಳೆದ ಒಂದು ದಶಕದಿಂದ ಕಾಫಿ ತೋಟಗಳ ಮಣ್ಣು ರಸಸಾರ ಪರೀಕ್ಷೆ ಮಾಡಿ, ಬೆಳೆಗಾರರಿಗೆ ನೆರವಾಗುತ್ತಿದ್ದ ಹಾಸನ ಜಿಲ್ಲಾ ಕಾಫಿ ಪ್ಲಾಂಟರ್ ಸಂಘವು ಇದೀಗ ಕಾಫಿ ತೋಟಗಳಿಗೇ ಹೋಗಿ ಮಣ್ಣಿನ ಮಾದರಿ ಸಂಗ್ರಹಿಸಿ, ಪರೀಕ್ಷೆಸುವ ಸಂಚಾರ ವಾಹದ ವ್ಯವಸ್ಥೆಯನ್ನೂ ಮಾಡಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಫಿ ಪ್ಲಾಂಟರ್ ಸಂಘದ ಅಧ್ಯಕ್ಷ ಕೆ.ಎನ್‌.ಸುಬ್ರಮಣ್ಯ ಮತ್ತು ಪದಾಧಿಕಾರಿಗಳು ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರ ಹಿತರಕ್ಷಣೆ ಉದ್ದೇಶದಿಂದ 1977 ರಲ್ಲಿ ಅಸ್ತಿತ್ವಕ್ಕೆ ಬಂದ ಪ್ಲಾಂಟರ್ ಸಂಘವು 2009ರಲ್ಲಿ ಸಕಲೇಶಪುರದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ಸಣ್ಣ ಕಾಫಿ ಬೆಳೆಗಾರರ ಕಾಫಿ ತೋಟಗಳ ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಸಾರಕ್ಕನುಗುಣವಾಗಿ ಕಾಫಿ ಗಿಡಗಳಿಗೆ ರಸಗೊಬ್ಬರ ಹಾಕುವ ಸಲಹೆ ನೀಡುತ್ತಾ ಬಂದಿದೆ.

ಎಲ್ಲ ಕಾಫಿ ಬೆಳೆಗಾರರೂ ತಮ್ಮ ತೋಟಗಳ ಮಣ್ಣನ್ನು ತಂದು ಪರೀಕ್ಷೆ ಮಾಡಿಸುವುದು ಕಷ್ಟ ಸಾಧ್ಯವೆಂದು ಪರಿಗಣಿಸಿ, ಕಾಫಿ ಬೆಳೆ ಪ್ರದೇಶದ ಪ್ರತಿ ಹಳ್ಳಿಗೂ ಹೋಗಿ ಅಲ್ಲಿನ ಕಾಫಿ ಬೆಳೆಗಾರರ ಮಣ್ಣು ಮಾದರಿ ಸಂಗ್ರಹಿಸಿ, ಅದನ್ನು ಪರೀಕ್ಷಾ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ಗೊಳ ಪಡಿಸಿ, ಯಾವ ಬೆಳೆಗಾರರ ತೋಟಕ್ಕೆ ಯಾವ ರಸ ಗೊಬ್ಬರ ಹಾಕಿದರೆ ಉತ್ತಮ ಬೆಳೆ ಮತ್ತು ಇಳುವರಿ ಬರುತ್ತದೆ ಎಂಬುದರ ಮಾಹಿತಿಯನ್ನು ಮುಂದಿನ ಮೇ ತಿಂಗಳಿನಿಂದ ಮಣ್ಣು ಪರೀಕ್ಷಾ ಸಂಚಾರ ವಾಹನ ಸೇವೆ ಆರಂಭವಾಗಲಿದೆ ಎಂದರು.

ಕಡಿಮೆ ಶುಲ್ಕ ಪಡೆದು ಬೆಳೆಗಾರರಿಗೆ ನೆರವು:
ಮಣ್ಣು ಪರೀಕ್ಷಾ ಸಂಚಾರ ವಾಹನದ ಖರೀದಿಗೆ ಜಿಲ್ಲಾ ಕಾಫಿ ಪ್ಲಾಂಟರ್ ಸಂಘದ ನಿರ್ದೇಶಕ, ಜಿಪಂ ಮಾಜಿ ಸದಸ್ಯ ಇ.ಎಸ್‌.ಲಕ್ಷ್ಮಣ ಅವರು 7 ಲಕ್ಷ ರೂ. ಕೊಡುಗೆ ನೀಡಿದ್ದಾರೆ. ಇದುವರೆಗೆ 7ರಿಂದ 8 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಸಂಚಾರ ವಾಹನ ಸೌಲಭ್ಯವಿರುವುದರಿಂದ 15 ಸಾವಿರ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಗೊಳಪಡಿಸಿ ಕಾಫಿ ಬೆಳೆಗಾರರಿಗೆ ಸಲಹೆ ನೀಡಲು ಸಾಧ್ಯವಾಗುತ್ತದೆ. ಒಂದು ಮಾದರಿ ಪರೀಕ್ಷೆಗೆ 360 ರೂ. ಶುಲ್ಕ ಪಡೆಯಲಾಗುತ್ತಿದೆ. ಕಾಫಿ ಮಂಡಳಿ 500 ರೂ. ಶುಲ್ಕ ಪಡೆಯುತ್ತಿದೆ. ಪ್ಲಾಂಟರ್ ಸಂಘವು ಕಾಫಿ ಮಂಡಳಿ ಗಿಂತ ಕಡಿಮೆ ಶುಲ್ಕ ಪಡೆದು ಬೆಳೆಗಾರರಿಗೆ ನೆರವಾಗುತ್ತಿದೆ ಎಂದು ಹೇಳಿದರು.

ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನ:
ದೇಶದಲ್ಲಿ ಈಗ 3 ಲಕ್ಷ ಟನ್‌ ಕಾಫಿ ಉತ್ಪಾದನೆಯಾಗಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಕಾಫಿ ರಪ್ತಿನಿಂದ ಸರ್ಕಾರಕ್ಕೆ ಈಗ 10 ಸಾವಿರ ಕೋಟಿ ರೂ. ಗೂ ಹೆಚ್ಚು ವಿದೇಶಿ ವಿನಿಮಯ ಸಿಗುತ್ತಿದೆ. ಮಣ್ಣು ಪರೀಕ್ಷೆ ಕೇಂದ್ರಗಳ ಹೆಚ್ಚಳ ಹಾಗೂ ವೈಜ್ಞಾನಿಕ ಸಂಶೋಧನೆಗಳಿಂದ ಕಾಫಿ ಉತ್ಪಾದನೆಯನ್ನು 5 ಲಕ್ಷ ಟನ್‌ ಹೆಚ್ಚಿಸಿ, ವಿಶ್ವದಲ್ಲಿ ಮೊದಲ ಸ್ಥಾನ ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪ್ಲಾಂಟರ್ ಸಂಘದ ಪದಾಧಿಕಾರಿಗಳಾದ ಎಂ.ಬಿ.ರಾಜೀವ್‌, ಪರಮೇಶ್ವರ್‌, ಕೃಷ್ಣೇಗೌಡ, ಎಂ.ಎಚ್‌.ರಮೇಶ್‌, ಇ.ಎಸ್‌. ಲಕ್ಷ್ಮಣ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next