Advertisement

ಟ್ರಾಫಿಕ್‌ ಅಂಬ್ರೆಲಾ

10:03 AM Feb 16, 2020 | Lakshmi GovindaRaj |

ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ. “ರೆಡಿಮೇಡ್‌ ಕ್ಯೂಬಿಕಲ್‌ ಚೌಕಿಗಳು ಇವು…

Advertisement

ಸಿಗ್ನಲ್‌ ಬಿಡಲು ಇನ್ನೂ 90 ಸೆಕೆಂಡುಗಳು ಬಾಕಿ. ಸುಡುವ ಬಿಸಿಲು ಬೇರೆ. ಹೆಲ್ಮೆಟ್‌ನ ಒಳಗಿನ ಅಷ್ಟ ದಿಕ್ಕುಗಳಿಂದ ದಳದಳನೆ ಇಳಿವ ಬೆವರು… ಇದು “ಡ್ರೂಣ್‌ ಡ್ರೂಣ್‌’ ಎನ್ನುತ್ತಾ ಸದ್ದು ಮಾಡುವ ಬೈಕ್‌ ಮೇಲೆ ಕುಳಿತ ಸವಾರರು ನಿತ್ಯ ಅನುಭವಿಸುವ ಕತೆ. ಆದರೆ, ಅದೇ ಸಿಗ್ನಲ್‌ ವೃತ್ತದಲ್ಲಿ ಅಂಪೈರ್‌ನಂತೆ ನಿಂತಿರುತ್ತಾರಲ್ಲ, ಟ್ರಾಫಿಕ್‌ ಪೊಲೀಸ್‌, ಅವರಿಗೆ ಆ ಬಿಸಿಲು ಲೆಕ್ಕವೇ ಇಲ್ಲ. ಸವಾರರಿಗೆ ಬಿಸಿಲ ತಾಪ ತಾತ್ಕಾಲಿಕವಾಗಿ ತಟ್ಟಿದರೆ, ಪೊಲೀಸರಿಗೆ ಹಗಲಿಡೀ ಅವರ ಕರ್ಮಭೂಮಿ ಕುಲುಮೆಯಂತೆಯೇ ಇರುತ್ತೆ.

ಆದರೂ ಅವರು ಬಿಸಿಲಿನ ಮೇಲೆ ಗಮನ ನೆಡುವುದಿಲ್ಲ. ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ. ಅದೇ ರೆಡಿಮೇಡ್‌ ಕ್ಯೂಬಿಕಲ್‌ ಚೌಕಿ. ಈ ಸುಧಾರಿತ ಪೊಲೀಸ್‌ ಚೌಕಿಗಳನ್ನು (ಕಿಯೋಸ್ಕ್) ಬಿಬಿಎಂಪಿಯು ರೂಪಿಸುತ್ತಿದೆ.

ಒಳಗೆ ಏನೇನಿದೆ?: ಈ ಚೌಕಿಯೊಳಗೆ ಹೋದರೆ, ಯಾರಿಗೂ ಆಶ್ಚರ್ಯವಾಗುತ್ತೆ. ಪೊಲೀಸರಿಗೆ ಬೇಕಾದ ಸಕಲ ಅನುಕೂಲಗಳೂ ಇಲ್ಲಿವೆ. ಬೆಂಕಿ ನಂದಿಸುವ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ವಾಕಿಟಾಕಿ, ಶುದ್ಧ ಕುಡಿವ ನೀರು, ಧ್ವನಿವರ್ಧಕ, ಸಿಸಿಟಿವಿ ಕ್ಯಾಮೆರಾಗಳು ಚೌಕಿಯ ಪ್ರಮುಖ ವಿಶೇಷತೆಗಳು.

ಕುರ್ಚಿ, ಟೇಬಲ್‌, ಸಾರ್ವಜನಿಕರ ಕುಂದು- ಕೊರತೆ ಪರಿಶೀಲನಾ ಬಾಕ್ಸ್‌, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಎಲ್‌ಇಡಿ ಸ್ಕ್ರೀನ್‌ಗಳು ಇಲ್ಲುಂಟು. ಕಿಯೋಸ್ಕ್ ಮೇಲ್ಭಾಗದಲ್ಲಿ ಸೋಲಾರ್‌ ಪ್ಯಾನೆಲ್‌ ಇದೆ. ಬಾಗಿಲಿನ ಬಳಿಯೇ ಬಯೋಮೆಟ್ರಿಕ್‌ ಅಳವಡಿಕೆಯಾಗಿದ್ದು, ಟ್ರಾಫಿಕ್‌ ಪೊಲೀಸರಷ್ಟೇ ಇದನ್ನು ತೆರೆಯಬಹುದು. ಒಳಗೆ ಇಬ್ಬರು ಸಿಬ್ಬಂದಿ ಆರಾಮವಾಗಿ ಕುಳಿತುಕೊಳ್ಳಬಹುದು. 8 ದಿಕ್ಕುಗಳಲ್ಲೂ ನೋಡಲು ಅನುವಾಗಲು, ಚೌಕಿಗೆ ಗಾಜಿನ ಕಿಟಕಿಯಿದೆ.

Advertisement

ಸೈನ್‌ಪೋಸ್ಟ್‌ನ ಸೃಷ್ಟಿ: ಪೊಲೀಸ್‌ ಚೌಕಿ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆಯನ್ನು “ಸೈನ್‌ಪೋಸ್ಟ್‌’ ಎಂಬ ಸಂಸ್ಥೆಗೆ 20 ವರ್ಷದ ಅವಧಿಗೆ ನೀಡಲಾಗಿದೆ. ಇನ್ನು ಬಿಬಿಎಂಪಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 509 ಜಂಕ್ಷನ್‌ಗಳಲ್ಲಿ ಪೊಲೀಸ್‌ ಚೌಕಿ ಅಳವಡಿಕೆಗೆ ಮೂರು ಪ್ಯಾಕೇಜ್‌ ಮಾಡಿ ಟೆಂಡರ್‌ ಆಹ್ವಾನಿಸಿದೆ. ಮೂರು ಪ್ಯಾಕೇಜ್‌ಗಳಲ್ಲಿ ಎರಡು ಪ್ಯಾಕೇಜ್‌ ಅಡಿಯಲ್ಲಿ 389 ಪೊಲೀಸ್‌ ಚೌಕಿ ನಿರ್ಮಿಸುವುದಕ್ಕೆ ಟೆಂಡರ್‌ ಅಂತಿಮಗೊಂಡಿದೆ.

ಎಲ್ಲೆಲ್ಲಿದೆ?: ಹಡ್ಸನ್‌ ವೃತ್ತ, ವೆಲ್ಲಾರ ಜಂಕ್ಷನ್‌, ಬಿಷಪ್‌ ಕಾಟನ್‌ ಶಾಲೆ, ಬ್ರಿಗೇಡ್‌ ರಸ್ತೆ, ವಿಂಡ್ಸರ್‌ ಮ್ಯಾನರ್‌ ವೃತ್ತ, ರಾಜಾರಾಂ ಮೋಹನ್‌ ರಾಯ್‌ ರಸ್ತೆ, ಲಾಲ್‌ಬಾಗ್‌ ವೃತ್ತ, ಮಿಲ್ಲರ್‌ ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ. ರಸ್ತೆ, ಹಳೇ ಮದ್ರಾಸ್‌ ರಸ್ತೆ, ಪೊಲೀಸ್‌ ತಿಮ್ಮಯ್ಯ ವೃತ್ತ, ಶಾಂತಿನಗರ ಸರ್ಕಲ್‌, ಅನಿಲ್‌ ಕುಂಬ್ಳೆ ವೃತ್ತ, ಚಾಲುಕ್ಯ ವೃತ್ತ ಸೇರಿದಂತೆ 19 ಕಡೆ ಕಿಯೋಸ್ಕ್ ನಿರ್ಮಾಣಗೊಂಡಿದೆ. ಸದ್ಯದಲ್ಲೇ ಇವು ಅನಾವರಣಗೊಳ್ಳಲಿವೆ.

ದಣಿವಾದಾಗ ಹೊಸ ಚೌಕಿಯಲ್ಲಿ ಕೆಲ ಹೊತ್ತು ಸುಧಾರಿಸಿಕೊಳ್ಳಬಹುದು. ಒಂದೆಡೆ ಕುಳಿತು ನಾಲ್ಕು ದಿಕ್ಕುಗಳಲ್ಲಿ ಸಂಚಾರ ವೀಕ್ಷಣೆ ಮಾಡಬಹುದು. ಅಲ್ಲದೆ, ತಾಂತ್ರಿಕವಾಗಿಯೂ ಹಲವು ಅನುಕೂಲಗಳಿವೆ.
-ಸದಾನಂದ, ಸಂಚಾರಿ ಪಶ್ಚಿಮ ವಲಯ

ನಗರದಲ್ಲಿ ಹೊಸದಾಗಿ ಅಳವಡಿಸುತ್ತಿರುವ ಪೊಲೀಸ್‌ ಚೌಕಿಗಳಿಂದ ಸಂಚಾರಿ ಪೊಲೀಸರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಬಿಸಿಲು ಮಳೆ, ಗಾಳಿಯಿಂದ ರಕ್ಷಣೆ ಪಡೆಯಬಹುದು.
-ಜಗದೀಶ್‌ ಸಂಚಾರ ಸಿಬ್ಬಂದಿ, ಕೇಂದ್ರ ವಲಯ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next