Advertisement

ನಗರ ಪ್ರದೇಶದಲ್ಲಿ ಫ್ರೀ ಟರ್ನ್ ಗಳಿಲ್ಲದೆ ಸಂಚಾರ ಒತ್ತಡ

12:40 PM May 31, 2022 | Team Udayavani |

ಕೂಳೂರು: ಇಲ್ಲಿನ ಹೆದ್ದಾರಿ 66ರ ನಂತೂರು – ಮುಕ್ಕ ನಡುವಿನ ಪ್ರದೇಶದಲ್ಲಿ ಫ್ರೀ ಟರ್ನ್ ಗೆ ಅವಕಾಶವಿದ್ದರೂ ಯಾವುದೇ ಯೋಜನೆ ರೂಪಿಸಿದೆ ನಗರದ ಜನತೆ ಪ್ರತಿನಿತ್ಯ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕೊಟ್ಟಾರ ಚೌಕಿ, ನಂತೂರು, ಸುರತ್ಕಲ್‌ ಜಂಕ್ಷನ್‌ಗಳು ವಿವಿಧೆಡೆ ನಗರದೊಳಗಿನ ಪ್ರದೇಶಕ್ಕೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ವೃತ್ತಗಳಾಗಿದ್ದು, ತಾಸುಗಟ್ಟಲೆ ಹೆದ್ದಾರಿಯಲ್ಲಿ ಕಾದು ಪ್ರವೇಶಿಸಬೇಕಾದ ಅನಿವಾರ್ಯವಿದೆ. ಸುಮಾರು 20 ಅಡಿಗಳಷ್ಟು ಜಾಗ ಹೆದ್ದಾರಿ ಇಲಾಖೆಯ ಆಧೀನದಲ್ಲೇ ಇದ್ದು ಸರ್ವಿಸ್‌ ರಸ್ತೆಯನ್ನೂ ನಿರ್ಮಾಣ ಮಾಡಲಾಗಿಲ್ಲ.

ಮೇಲ್ಸೇತುವೆ ನಿರ್ಮಾಣದಿಂದಾಗಿ ಸುರತ್ಕಲ್‌ ಜಂಕ್ಷನ್‌ನ ಕೃಷ್ಣಾಪುರ, ಕಾಟಿಪಳ್ಳ ಪ್ರದೇಶಕ್ಕೆ ತಿರುಗುವ ಭಾಗದಲ್ಲಿ ಮತ್ತು ಕೊಟ್ಟಾರ ಚೌಕಿಯಲ್ಲಿ ಫ್ರೀ ಟರ್ನ್ ವ್ಯವಸ್ಥೆ ರೂಪಿಸಲು ಅವಕಾಶವೇ ಇಲ್ಲದಂತಾಗಿದೆ. ಏಕಮುಖ ಸೇತುವೆ ನಿರ್ಮಾಣದಿಂದ ಜನತೆ ಬವಣೆ ಪಡುವಂತಾಗಿದೆ. ಕೆಪಿಟಿ ವೃತ್ತ ಬಳಿ ಫ್ರೀ ಟರ್ನ್ ನೀಡಲಾಗಿದ್ದರೂ ನಗರಕ್ಕೆ ಹೆದ್ದಾರಿ ದಾಟಿಯೇ ಪ್ರವೇಶಿಸಬೇಕಿದೆ.

ಸುಗಮ ಸಂಚಾರಕ್ಕೆ ಅಡ್ಡಿ

Advertisement

ನಂತೂರು ವೃತ್ತ ಕದ್ರಿ ಕೆಪಿಟಿ ಹೆದ್ದಾರಿ ವಿಸ್ತರಿಸಿ ಟ್ರಾಫಿಕ್‌ ಜಾಮ್‌ ತಪ್ಪಿಸಲು ಸಾಕಷ್ಟು ಅವಕಾಶವಿದೆ. ಮಂಗಳಾ ದೇವಿ ಯಿಂದ ಪಣಂಬೂರು ಕೃಷ್ಣಾಪುರ ಕಡೆ 15 ನಂಬರ್‌ಗಳ 40ಕ್ಕೂ ಮಿಕ್ಕಿ ಸಿಟಿ ಬಸ್‌, ನಿತ್ಯ ಇತರ ಸಾವಿರಾರು ವಾಹನಗಳು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ವಿಸ್ತರಣೆ ಅನಿವಾರ್ಯವಾಗಿದೆ. ಇದಕ್ಕಾಗಿ ಜಾಗವನ್ನೂ ಮೀಸಲಿಡಲಾಗಿದೆ. ಈ ಹಿಂದೆ ಎಡಭಾಗದಲ್ಲಿ ಫ್ರೀ ಟರ್ನ್ ಗೆ ಬೇಕಾದ ಸಿದ್ಧತೆ, ಗುರುತನ್ನು ಮಾಡಲಾಗಿತ್ತು. ಆದರೆ ನಂತೂರು ಜಂಕ್ಷನ್‌ ಬಳಿಯ ವಾಣಿಜ್ಯ ಕಟ್ಟಡವೊಂದರ ಅಲ್ಪ ಭಾಗ ಇದಕ್ಕೆ ಅಡ್ಡಿಯಾಗುತ್ತಿದ್ದು, ಈ ಯೋಜನೆ ಮುಂದೆ ಸಾಗಲಿಲ್ಲ. ಹೀಗಾಗಿ ಕದ್ರಿಯಿಂದ ನೇರವಾಗಿ ಹೆದ್ದಾರಿ ಮೂಲಕ ಕೆಪಿಟಿ, ಲಾಲ್‌ಬಾಗ್‌ ಹೋಗುವ ವಾಹನಗಳೂ ಟ್ರಾಫಿಕ್‌ನಲ್ಲಿ ಸಿಲುಕಿ ಕಿ.ಮೀ. ಗಟ್ಟಲೆ ತೆವಳುತ್ತಾ ಸಾಗುವಂತಾಗಿದೆ. ಕೆಲವೆಡೆ ವಾಹನ ನಿಲುಗಡೆ, ಇನ್ನು ಕೆಲವಡೆ ರಸ್ತೆ ಬದಿ ಸ್ಥಳವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಪಾಲಿಕೆ ನಗರ ಸಂಚಾರವನ್ನು ಸುಗಮ ಮಾಡುವ ನಿಟ್ಟಿನಲ್ಲಿ ನಂತೂರು ಕೆಪಿಟಿ ಯೋಜನೆ ಕೈಗೆತ್ತಿಕೊಂಡಲ್ಲಿ ಶೇ. 50ರಷ್ಟು ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಲಿದೆ.

ಅಧಿಕಾರಿಗಳಿಗೆ ಸೂಚಿಸಲಾಗುವುದು

ನಂತೂರು ಜಂಕ್ಷನ್‌ ಸಹಿತ ಹೆದ್ದಾರಿ ಭಾಗದಲ್ಲಿ ನಗರದೊಳಗೆ ಪ್ರವೇಶಿಸುವ ಕಡೆ ಫ್ರೀ ಟರ್ನ್ ಮಾಡುವ ಸ್ಥಳಾವಕಾಶವಿದ್ದರೆ ಈ ಬಗ್ಗೆ ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. -ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ

ಕಾರ್ಯ ಯೋಜನೆಗೆ ಆಗ್ರಹ

ನಂತೂರು ಜಂಕ್ಷನ್‌ನಿಂದ ಕೆಪಿಟಿ, ಸರ್ಕ್ನೂಟ್‌ಹೌಸ್‌ವರೆಗೆ ಫ್ರೀ ಟರ್ನ್ ಗೆ ಬೇಕಾದಷ್ಟು ಸ್ಥಳಾವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಂಡಲ್ಲಿ ನಂತೂರಿ ನಿಂದ ಕೆಪಿಟಿ ಕಡೆಗೆ ಹೋಗುವ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಆಗಲಾರದು. ಈ ಬಗ್ಗೆ ಒಂದು ಬಾರಿ ಅಧ್ಯಯನ ನಡೆದಿದೆ.ಕಾರ್ಯಗತ ಆಗದೆ ಇಂದು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಬಗ್ಗೆ ಕರಾವಳಿ ಸಿಟಿ ಬಸ್‌ ಮಾಲಕರ ಒಕ್ಕೂಟ ಮಂಗಳೂರು ಪಾಲಿಕೆಗೆ ಮನವಿ ಸಲ್ಲಿಸಿ ಕಾರ್ಯಯೋಜನೆ ರೂಪಿಸಲು ಆಗ್ರಹ ಮಾಡಲಿದೆ. -ರಾಮಚಂದ್ರ ಪಿಲಾರ್‌, ಕಾರ್ಯದರ್ಶಿ ಕರಾವಳಿ ಸಿಟಿ ಬಸ್‌ ಮಾಲಕರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next