ಹೊಸಪೇಟೆ: ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅಡ್ಡಾದಿಡ್ಡಿ ವಾಹನ ಸಂಚಾರದಿಂದಾಗಿ ಸಾರ್ವಜನಿಕರು ಹೈರಾಣವಾಗುತ್ತಿದ್ದಾರೆ. ಶರವೇಗದಲ್ಲಿ ಬೆಳೆಯುತ್ತಿರುವ ನಗರದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಟ್ರಾಫಿಕ್ ಸಿಗ್ನಲ್‌ಗಳು ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
ವಿಜಯನಗರ ಜಿಲ್ಲೆ ಉದಯವಾಗಿ ವರ್ಷ ಪೂರ್ಣಗೊಂಡಿದೆ. ಆದರೆ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಎದುರಾಗುತ್ತಿದೆ. ಪುನೀತ್ ರಾಜಕುಮಾರ್ ವೃತ್ತ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಸ್ಥಗಿತಗೊಂಡಿರುವ ಟ್ರಾಫಿಕ್ ಸಿಗ್ನಲ್‌ಗಳ ಎರಡು-ಮೂರು ವರ್ಷ ಕಳೆದರೂ ಸರಿಪಡಿಸುವ ಕೆಲಸವಾಗಿಲ್ಲ. ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಹೊಸಪೇಟೆಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚುತ್ತಿದೆ.
ಅಡ್ಡಾದಿಡ್ಡಿ ಸಂಚಾರ: ಅಂಬೇಡ್ಕರ್ ಹಾಗೂ ಪುನೀತ್ ರಾಜಕುಮಾರ್ ಸರ್ಕಲ್‌ಗಳು ಸದಾ ಜನರ ಓಡಾಟದಿಂದ ತುಂಬಿರುತ್ತದೆ. ಹತ್ತಿರದಲ್ಲಿರುವ ಬಸ್ ನಿಲ್ದಾಣ, ತಾಲೂಕು ಕಚೇರಿ, ಉಪನೋಂದಣಿ ಕಚೇರಿ ಮುಂತಾದ ಕಚೇರಿ ಹಾಗೂ ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರ ಬಿಡುವಿಲ್ಲದೇ ಸಾಗಿರುತ್ತದೆ. ಟ್ರಾಫಿಕ್ ಸಿಗ್ನಲ್‌ಗಳು ಕೆಲಸ ಮಾಡದೇ ಇರುವುದರಿಂದ ವಾಹನ ಸವಾರರು ಅಡ್ಡಾದಿಡ್ಡಿ ಸಂಚಾರ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅಡ್ಡಿ ಮಾಡುವುದು ಆಗಾಗ ಕಂಡು ಬರುವುದು ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ಸಣ್ಣಪುಟ್ಟ ಅಪಘಾತಗಳಾಗಿ ಪರಸ್ಪರ ಗಲಾಟೆ-ಜಗಳಗಳಿಗೆ ಕಾರಣವಾದ ಘಟನೆಗಳು ನಡೆದಿವೆ.
ಪೊಲೀಸ್ ಸಿಬ್ಬಂದಿಗೂ ಕಿರಿಕಿರಿ: ಪ್ರಮುಖ ವೃತ್ತಗಳಲ್ಲಿ ಅಧಿಕ ವಾಹನ ಸಂಚಾರದಿಂದ ಪೊಲೀಸ್ ಸಿಬ್ಬಂದಿ ಕೂಡ ಟ್ರಾಫಿಕ್ ಸಮಸ್ಯೆ ನಿವಾರಿಸಲು ಪರದಾಡುತ್ತಿದ್ದಾರೆ. ಟ್ರಾಪಿಕ್ ಸಿಗ್ನಲ್ ಕೆಲಸ ಮಾಡುತ್ತಿದರೆ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ. ಇದರಿಂದ ಪೊಲೀಸ್ ಸಿಬ್ಬಂದಿಗೆ ಕಿರಿಕಿರಿ ಆಗುವುದಿಲ್ಲ. ತ್ವರಿತಗತಿಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.