ಬೆಂಗಳೂರು: ವಿದ್ಯಾರ್ಥಿಗಳ ಹೋರಾಟದಿಂದ ಎಚ್ಚೆತ್ತ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಪೊಲೀಸ್ ಇಲಾಖೆ ಜ್ಞಾನಭಾರತಿ ಅವರಣದಲ್ಲಿ ಗುರುವಾರದಿಂದಲೇ ಜಾರಿಗೆ ಬರುವಂತೆ ಸಂಚಾರ ನಿಯಮಗಳನ್ನು ಕಠಿಣಗೊಳಿಸಿದೆ.
ಮೈಸೂರು ರಸ್ತೆ ಹಾಗೂ ಕೆಂಗೇರಿ ಹೊರ ವರ್ತುಲ ರಸ್ತೆ ದ್ವಾರಗಳನ್ನು ಹೊರತುಪಡಿಸಿ ಜ್ಞಾನಭಾರತಿ ಆವರಣದ ಉಳಿದ ದ್ವಾರಗಳು ರಾತ್ರಿ 10ರಿಂದ ಬೆಳಗಿನ ಜಾವ 5ರ ವರೆಗೂ ಬಂದ್ ಮಾಡಿದೆ. ಮೈಸೂರು ರಸ್ತೆಯಿಂದ ಹೊರ ವರ್ತುಲ ರಸ್ತೆ ದ್ವಾರವನ್ನು ಬಂದ್ ಮಾಡಿದರೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕಾಗಿ ಈ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಗೇಟಿನ ಮೇಲೆ ಸೂಚನಾಫಲಕ ಹಾಕಿದೆ.
ನಾಗರಬಾವಿ, ಮರಿಪ್ಪನಪಾಳ್ಯ, ಕೆಂಗೇರಿ ಹೊರ ವರ್ತುಲ ರಸ್ತೆ ಹಾಗೂ ಮೈಸೂರು ರಸ್ತೆ ಸೇರಿ ಜ್ಞಾನಭಾರತಿ ವಿವಿಗೆ ನಾಲ್ಕು ದ್ವಾರಗಳಿವೆ. ಈ ಪೈಕಿ ನಾಗರಬಾವಿ 2 ದ್ವಾರಗಳು ಬಂದ್ ಆಗಲಿವೆ.
ಬೆಂವಿವಿ ಕ್ಯಾಂಪಸ್‌ನಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ತಡೆ ನೀಡುವ ಬಗ್ಗೆ ಕ್ರಮ ವಹಿಸುವಂತೆ ವಸತಿ ಸಚಿವ ವಿ.ಸೋಮಣ್ಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸೋಮಣ್ಣ ಅವರು ಇತ್ತೀಚಿಗೆ ಬೆಂವಿವಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದ ವೇಳೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದರು.
ಡ್ರಂಕ್ ಆ್ಯಂಡ್ ಡ್ರೈವ್ ಚೆಕ್: ಗುರುವಾರ ರಾತ್ರಿಯಿಂದಲೇ ಬೆಂವಿವಿಯ ಕ್ಯಾಂಪಸ್ ನಲ್ಲೂ “ಡ್ರಂಕ್ ಆ್ಯಂಡ್ ಡ್ರೈವ್’ ಪರಿಶೀಸಲು ಪೊಲೀಸರು ಮುಂದಾಗಿದ್ದಾರೆ. ಸಾಮಾನ್ಯ ರಸ್ತೆಗಳಲ್ಲಿ ವಾಹನಗಳ ತಪಾಸಣೆ ಮಾಡುವ ರೀತಿಯಲ್ಲಿಯೇ ಬೆಂವಿವಿ ಕ್ಯಾಂಪಸ್‌ನಲ್ಲಿಯೂ ತಪಾಸಣೆ ಮಾಡಲಿದ್ದಾರೆ. ಇದರಿಂದ ಬೆಂವಿವಿಯ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಸಂಚಾರ ಮಾಡಿದರೂ, ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇಷ್ಟು ವರ್ಷ ಕ್ಯಾಂಪಸ್ ಒಳಗೆ ಪೊಲೀಸರ ತಪಾಸಣೆಗೆ ಅವಕಾಶ ಕಲ್ಪಿಸಿರಲಿಲ್ಲ.