Advertisement

ಸಂಚಾರ ನಿಯಮ ಪಾಲನೆ: ವಿಶೇಷ ತರಬೇತಿ ಚಿಂತನೆ

11:29 PM Jan 06, 2020 | Sriram |

ಸಂಚಾರಿ ನಿಯಮ ಉಲ್ಲಂಘನೆಗೆ ಅಧಿಕ ಮೊತ್ತದ ದಂಡ ವಿಧಿಸುವುದು, ನಿಯಮ ಉಲ್ಲಂ ಸದಂತೆ ಜಾಗೃತಿ ಮೂಡಿಸುತ್ತಿದ್ದರೂ ಅಪಘಾತಗಳ ಸಂಖ್ಯೆ ನಿಯಂತ್ರಣಕ್ಕೆ ಬಾರದೇ ಇರುವುದು ಆತಂಕಕಾರಿಯಾಗಿದೆ. ಪ್ರತಿದಿನಕ್ಕೆ ಸರಾಸರಿ 3ರಷ್ಟು ಅಪಘಾತಗಳಾಗುತ್ತಿದೆ. ಪ್ರತಿ 31 ಗಂಟೆಗೋರ್ವ ಸವಾರ ಮೃತಪಡುತ್ತಿದ್ದಾನೆ. ಚಾಲಕರು ಸಂಚಾರಿ ನಿಯಮ ಪಾಲಿಸಬೇಕು, ಸರಕಾರ ರಸ್ತೆಗಳನ್ನು ಹೊಂಡಮುಕ್ತಗೊಳಿಸಬೇಕು.

Advertisement

ಉಡುಪಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ತಗ್ಗಿಸಲು ಜಿಲ್ಲಾಡಳಿತ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ವಿಶೇಷ ತರಬೇತಿ ನೀಡಲು ಚಿಂತನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಬರೋಬ್ಬರಿ 712 ಮಂದಿ ಅಪಘಾತಕ್ಕೆ ಪ್ರಾಣತೆತ್ತಿದ್ದಾರೆ.

ಯುವ ಸಮುದಾಯವೇ ಅಧಿಕ
ಜಿಲ್ಲೆಯಲ್ಲಿ ರಸ್ತೆ ಅಪಘಾತದಿಂದ 2017ರಲ್ಲಿ 225 ಮಂದಿ ಪ್ರಾಣ ಕಳೆದುಕೊಂಡು 1,314 ಮಂದಿ ಗಾಯಗೊಂಡಿದ್ದಾರೆ. 2018ರಲ್ಲಿ 228 ಮಂದಿ ಮರಣ ಹೊಂದಿದ್ದು, 1,271 ಮಂದಿ ಗಾಯಗೊಂಡಿದ್ದಾರೆ. 2019ರಲ್ಲಿ 259 ಮಂದಿ ಮರಣಹೊಂದಿದ್ದು, 1,210 ಮಂದಿ ಗಾಯಗೊಂಡಿದ್ದಾರೆ.

ಅತಿ ವೇಗದ ಚಾಲನೆ ಕಾರಣ
ಅತಿ ವೇಗ ಹಾಗೂ ಸಂಚಾರ ನಿಯಮಗಳ ಉಲ್ಲಂ ಘನೆಯಿಂದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ. ಪ್ರತಿ ಅಪಘಾತದ ಹಿನ್ನೆಲೆಯಲ್ಲಿ ನಡೆಯುವ ತಪಾಸಣೆ ಸಂದರ್ಭ ಹೆಚ್ಚು ವೇಗವೆ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ಪೊಲೀಸರು. ತಲುಪುವ ಸ್ಥಳಕ್ಕೆ ಅರ್ಧ ಗಂಟೆ ಮೊದಲೇ ಹೊರಟರೆ ಅತಿ ವೇಗದ ಅನಿವಾರ್ಯತೆ ಇರುವುದಿಲ್ಲ.

ಜೀಬ್ರಾ ಕ್ರಾಸ್‌
ಜಿಲ್ಲೆಯಲ್ಲಿ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಸೂಕ್ತ ಎಚ್ಚರಿಕೆ ಫ‌ಲಕಗಳನ್ನು ಅಳವಡಿಸುವ ಬಗ್ಗೆ ಶೀಘ್ರದಲ್ಲೇ ಕ್ರಿಯಾಯೋಜನೆಗಳು ರೂಪಿಸಲಾಗುವುದು. ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಮತ್ತು ಅಗತ್ಯವಿರುವಲ್ಲಿ ಜೀಬ್ರಾ ಕ್ರಾಸ್‌ ಅಳವಡಿಸಲು ಕೂಡ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.

Advertisement

ಕಾರಣ ಹಲವು
ವೇಗದ ಚಾಲನೆ, ಕುಡಿದು ವಾಹನ ಚಲಾಯಿಸುವುದು, ಸಮರ್ಪಕ ತರಬೇತಿ ಕೊರತೆ, ಸೀಟ್‌ ಬೆಲ್ಟ್ ಬಳಸದೆ ಇರುವುದು, ದ್ವಿಚಕ್ರ ವಾಹನಗಳನ್ನು ಹೆಲ್ಮೆಟ್‌ ಧರಿಸದೆ ಓಡಿಸುವುದು, ಚಾಲನೆ ವೇಳೆ ಮೊಬೈಲ್‌ ಫೋನ್‌ಗಳ ಬಳಕೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ಸವಾರರ ತಪ್ಪಿನಿಂದಲೇ ಹೆಚ್ಚಿನ ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತಿವೆ. ಅದರಲ್ಲೂ 18ರಿಂದ 35 ವರ್ಷದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದಾರೆ. ಯುವಜನತೆ ಎಚ್ಚೆತ್ತುಕೊಂಡು ಅಪಘಾತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯಗಳನ್ನು ಪರಿಗಣಿಸಿದರಷ್ಟೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.

ರಸ್ತೆ ಸುರಕ್ಷೆ
ವಾಹನ ಚಾಲಕರಿಗೆ ಸುರಕ್ಷಿತ ಚಾಲನೆಯೇ ಧ್ಯೇಯವಾಗಬೇಕು.

ವಿಶೇಷ
ತರಬೇತಿ
ಚಾಲನ ಪರವಾನಿಗೆ ನೀಡುವ ಸಂದರ್ಭದಲ್ಲಿ ಹಳೆಯ ಪದ್ಧತಿಯಂತೆ ಕೇವಲ ಸೂಚನ ಸಂಜ್ಞೆಗಳನ್ನು ತಿಳಿಸುವ ಬದಲು ಸಂಪನ್ಮೂಲ ವ್ಯಕ್ತಿಗಳಿಂದ ಅಪಘಾತ ರಹಿತ ಚಾಲನೆಯ ಬಗ್ಗೆ ತರಬೇತಿ ನೀಡುವ ಯೋಜನೆಯನ್ನೂ ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕಾಗಿ ಗುತ್ತಿಗೆ ಆಧಾರದಲ್ಲಿ ಸಿಬಂದಿ ನೇಮಕ ಮಾಡುವ ಕುರಿತೂ ಜಿಲ್ಲಾಡಳಿತ ಹಾಗೂ ಆರ್‌ಟಿಒ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಕ್ಕ ಮಟ್ಟಿಗೆ ರಸ್ತೆ ಅಪಘಾತಕ್ಕೆ ಬ್ರೇಕ್‌ ಹಾಕುವ ಸಿದ್ಧತೆಯಲ್ಲಿದ್ದಾರೆ. ಸುರಕ್ಷಾ ಕ್ರಮಗಳನ್ನು ಸವಾರರು ಕಡ್ಡಾಯವಾಗಿ ಪಾಲಿಸಬೇಕು.

ಸಮರ್ಪಕ ತರಬೇತಿ ಅಗತ್ಯ
ಚಾಲನಾ ಪರವಾನಿಗೆ ನೀಡುವ ಮುನ್ನ ಚಾಲಕರಿಗೆ ರಸ್ತೆ ಸುರಕ್ಷೆ, ಸಂಚಾರಿ ನಿಯಮಗಳ ಪಾಲನೆ ಕುರಿತು ವಿವರವಾದ ತರಬೇತಿ ಮೂಲಕ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸಲು ಸಾಧ್ಯವಿದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ

ನಿರಂತರ ಕಾರ್ಯಾಚರಣೆ
ಸಂಚಾರ ನಿಯಮಗಳನ್ನು ಮೀರಿ ವಾಹನ ಚಾಲನೆ ಮಾಡುವುದರಿಂದಲೆ ಅತ್ಯಧಿಕ ಸಂಖ್ಯೆಯಲ್ಲಿ ಅಪಘಾತಗಳು ನಡೆಯುತ್ತಿವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ಬಗ್ಗೆ ಅತೀ ಹೆಚ್ಚು ಜಾಗೃತರಾಗಬೇಕು. ಸಾರಿಗೆ ನಿಯಮ ಉಲ್ಲಂ ಸುವವರ ವಿರುದ್ದ ಪೊಲೀಸರ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.
-ಕುಮಾರಚಂದ್ರ, ಎಎಸ್‌ಪಿ

ಕಡಿವಾಣ ಉದ್ದೇಶ
ಸಾರಿಗೆ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ವಿಶೇಷ ತರಬೇತಿಗಳನ್ನು ನಡೆಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಸಾಮಾನ್ಯ ಪರೀಕ್ಷೆಗಳ ಜತೆಗೆ ಈ ತರಬೇತಿಗಳು ನಡೆಯಲಿವೆ. ಈ ಮೂಲಕ ಅಪಘಾತಗಳಿಗೆ ಸಾಧ್ಯವಾದಷ್ಟು ಕಡಿವಾಣ ಹಾಕುವ ಉದ್ದೇಶವನ್ನು ಹೊಂದಲಾಗಿದೆ.
-ರಾಮಕೃಷ್ಣ ರೈ
ಪ್ರಾದೇಶಿಕ ಸಾರಿಗೆ ಅಧಿಕಾರಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next