ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿವರೆಗಿನ ಪಠ್ಯ ಪುಸ್ತಕದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ವಿಷಯವನ್ನು ಅಳವಡಿಸಲು ಶಾಲಾ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಸಂಚಾರ ಸಂಪರ್ಕ ದಿವಸ ಅಂಗವಾಗಿ ಪೀಣ್ಯ ಕೈಗಾರಿಕಾ ಪ್ರದೇಶ ಅಸೋಸಿಯೇಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬೆಳೆಯುವ ಸಿರಿ ಮೊಳಕೆ’ಯಲ್ಲಿ ಎಂಬ ಗಾಧೆ ಮಾತಿನಂತೆ, ಸಣ್ಣ ಮಕ್ಕಳಿಂದಲೇ ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಕ್ರಮಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಪ್ರಮುಖವಾಗಿ ಸಂಚಾರ ಪೊಲೀಸ್ ವಿಭಾಗದಿಂದಲೇ ಸಿದ್ಧಪಡಿಸಿರುವ ಸಂಚಾರ ನಿಯಮ ಮತ್ತು ಸುರಕ್ಷತೆ ಜಾಗೃತಿ ಕುರಿತ ವಿಷಯವನ್ನು 1ರಿಂದ 10ನೇ ತರಗತಿ ವರೆಗಿನ ಪಠ್ಯಪುಸ್ತಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಕ್ರಮದಲ್ಲಿ ಅಳವಡಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಗೆ ಮನವಿ ಮಾಡಿ, ಪಠ್ಯಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರು.
ಒಂದು ವೇಳೆ ಶಿಕ್ಷಣ ಇಲಾಖೆ ಸಂಚಾರ ಪೊಲೀಸರ ಪಠ್ಯಕ್ರಮವನ್ನು ಅಳವಡಿಸಿಕೊಂಡರೆ, ಚಿಕ್ಕ ಮಕ್ಕಳಿಂದಲೇ ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ದಂತಾಗುತ್ತದೆ. ಇದರೊಂದಿಗೆ ಸ್ಟುಡೆಂಟ್ ಅಸೋಸಿಯೇಷನ್ ರೋಡ್ ಸೇಫ್ಟಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡಿ 4ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ ಕಾಲ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಟ್ರಾಫಿಕ್ ಪಾರ್ಕ್‌ನಲ್ಲಿ ದಿನಕ್ಕೆ ಒಂದು ಶಾಲೆಯ 60 ಮಕ್ಕಳನ್ನು ಕರೆತಂದು ಮೂರು ಗಂಟೆಗೂ ಹೆಚ್ಚು ಕಾಲ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ವೀಲ್ಹಿಂಗ್ ಹಾವಳಿಗೆ ಬ್ರೇಕ್: ಆಯುಕ್ತ: ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಂಚಾರ ದಟ್ಟಣೆ, ವೀಲ್ಹಿಂಗ್ ಹಾವಳಿ, ಪಾದಚಾರಿ ಮಾರ್ಗ ಒತ್ತುವರಿ, ಸರಕು-ಸಾಗಣೆ ವಾಹನಗಳ ಬೇಕಾ ಬಿಟ್ಟಿ ಪಾರ್ಕಿಂಗ್ ಸೇರಿ ಇತರೆ ಸಮಸ್ಯೆಗಳನ್ನು ಆಯುಕ್ತರ ಬಳಿ ಹಂಚಿಕೊಂಡರು. ಅದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತ ಬಿ.ದಯಾನಂದ್. ಇತ್ತೀಚೆಗೆ ಪಶ್ಚಿಮ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 16 ಜನರ ತಂಡವನ್ನು ಪತ್ತೆ ಹಚ್ಚಿದ್ದು, ಅವರೆಲ್ಲರೂ ಅಪ್ರಾಪ್ತರಾಗಿದ್ದಾರೆ. ಅವರ ಪೋಷಕರ ಬಳಿ 5 ಲಕ್ಷ ರೂ. ವರೆಗಿನ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ನಿಯಮ ಉಲ್ಲಂಘನೆಯಲ್ಲಿ ತೊಡಗಿಕೊಂಡರೆ ಅದನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಇನ್ನು ಬೈಕ್‌ಗಳ ವಿನ್ಯಾಸ ಮಾಡುವವರು ಮತ್ತು ಮಾಡಿಸಿಕೊಳ್ಳವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
6 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು: ಸಂಚಾರ ಪೊಲೀಸ್ ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಸಂಚಾರ ಪೊಲೀಸರು ವಿವಿಧ ಶಾಲೆಗಳ ಬಳಿ ಕಾರ್ಯಾ ಚರಣೆ ನಡೆಸಿದ ವೇಳೆ ಬಹಳಷ್ಟು ಪಾಲಕರು ಮಕ್ಕಳಿಗೆ ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನದಲ್ಲಿ ಕರೆ ದೊಯ್ಯುತ್ತಿರುವುದು ಕಂಡು ಬಂದಿತ್ತು. ಇದರ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ 6 ವರ್ಷದ ಮೇಲ್ಪಟ್ಟ ಮಕ್ಕಳು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. 6 ವರ್ಷ ಮೇಲ್ಪಟ್ಟ ಮಕ್ಕಳೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಆದರೆ, ಸಂಚಾರ ಪೊಲೀಸರು ಇದುವರೆಗೆ ಈ ಬಗ್ಗೆ ನಿಗಾ ವಹಿಸುತ್ತಿರಲಿಲ್ಲ. ಇತ್ತೀಚೆಗೆ ಬೆಂಗಳೂರಿನ ವಿವಿಧ ಶಾಲೆಗಳ ಸುತ್ತ-ಮುತ್ತ ಕಾರ್ಯಾಚರಣೆ ನಡೆಸಿದ ವೇಳೆ ಬಹುತೇಕ ಪಾಲಕರು ಮಕ್ಕಳಿಗೆ ಹೆಲ್ಮೆಟ್ ಹಾಕಿಸದೇ ಅಜಾಗರೂಕತೆಯಿಂದ ಕರೆದುಕೊಂಡು ಹೋಗುವುದು ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ವಿಭಾಗದ ಪೊಲೀಸರು ಶನಿವಾರ ವಿವಿಧ ಠಾಣೆಗಳಲ್ಲಿ ಹಮ್ಮಿಕೊಂಡಿದ್ದ ಸಂಚಾರ ಸಂಪರ್ಕ ದಿನದ ಕಾರ್ಯಕ್ರಮದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳೂ ಹೆಲ್ಮೆಟ್ ಧರಿಸಬೇಕು ಎಂಬ ಕುರಿತು ಜಾಗೃತಿ ಮೂಡಿಸಲಾಗಿದೆ. ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ, ಸಂಜೆ ವೇಳೆ ಜನದಟ್ಟಣೆ ನಿಯಂತ್ರಣಕ್ಕೆ ಸಿಬ್ಬಂದಿ ನಿಯೋಜಿಸಿ
ಪೀಣ್ಯ ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ಮುಖ್ಯ ಸಮಸ್ಯೆ ಜನದಟ್ಟಣೆ. ಬೆಳಗ್ಗೆ 8 ರಿಂದ 9, ಸಂಜೆ 5 ರಿಂದ 7.30ರವರೆಗೆ ಹೆಚ್ಚು ಇರುತ್ತದೆ. ಅದನ್ನು ನಿಯಂತ್ರಿಸಲು ಹೆಚ್ಚು ದಟ್ಟಣೆ ಉಂಟಾಗುವ ಬ್ಲಾಕ್ ಸ್ಪಾಟ್‌ಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಪೀಣ್ಯ ಕೈಗಾರಿಕಾ ವಲಯಕ್ಕೆ ಸರಕುಗಳನ್ನು ಹೊತ್ತು ಬರುವ ಲಾರಿಗಳನ್ನು ನೆಲಮಂಗಲ ಬಳಿಯೇ ತಡೆಯಲಾಗುತ್ತಿದೆ. ಪೀಣ್ಯ ಕೈಗಾರಿಕೆಗಳ ಬಿಲ್ ಹೊಂದಿರುವ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪೀಣ್ಯ ಕೈಗಾರಿಕಾ ಪ್ರದೇಶ ಅಸೋಸಿಯೇಷನ್ ಅಧ್ಯಕ್ಷ ಎಚ್. ಎಂ.ಆರೀಫ್ ಆಯುಕ್ತರ ಬಳಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.