ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿಯ ಮಸೀದಿ ಹಾಗೂ ಚಾಮರಾಜಪೇಟೆ ಬಿಬಿಎಂಪಿ ಆಟದ ಮೈದಾನದ ಬಳಿ ವಾಹನ ಸಂಚಾರವನ್ನು ತಾತ್ಕಾಲಿಕ ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ಸಂಚಾರ ನಿಷೇಧ ?: ಬೆಳಗ್ಗೆ 6 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೂ ಬಿಜಿಎಸ್ ಮೇಲ್ಸೇತುವೆಯಿಂದ ಟೌನ್‌ಹಾಲ್‌ವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ.
ಇನ್ನು ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಗರ್ ಆಸ್ಪತ್ರೆ ಜಂಕ್ಷನ್, ಜಿ.ಡಿ.ಮರ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್‌ವರೆಗೆ, 39ನೇ ಕ್ರಾಸ್ ರಸ್ತೆಯಲ್ಲಿ ಗುರಪ್ಪನಪಾಳ್ಯ ಜಂಕ್ಷನ್‌ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಮೈಸೂರು ರಸ್ತೆಯ ಕಡೆಯಿಂದ ಪುರಭವನ ಕಡೆಗೆ ತೆರಳುವ ವಾಹನಗಳು ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ಕಿಮ್ಕೋ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ವಿಜಯನಗದ ಮೂಲಕ ಸಾಗಬಹುದು. ಪುರಭವನ ಕಡೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು ಬಿಜಿಎಸ್ ಮೇಲ್ಸೇತುವೆಯ ಕೆಳಗಿನ ರಸ್ತೆಯನ್ನು ಬಳಸಿಕೊಂಡು ವೆಟರ್ನರಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆಯಬೇಕು. ಗೂಡ್ಸ್ ಶೆಡ್ ರಸ್ತೆಯ ಮೂಲಕ ಅಥವಾ ಶಿರಸಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಜೆಜೆ ನಗರ-ಟ್ಯಾಂಕ್‌ಬಂಡ್ ರಸ್ತೆ-ಬಿನ್ನಿ ಮಿಲ್ ಜಂಕ್ಷನ್- ಹುಣಸೇಮರದ ಮೂಲಕ ಸಾಗಬಹುದು. ಬಸವನಗುಡಿ ಹಾಗೂ ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು, ಚಾಮರಾಜಪೇಟೆ 1ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆಯ ಸಿರ್ಸಿ ವೃತ್ತ, ಬಿನ್ನಿಮಿಲ್ ರಸ್ತೆ ಅಥವಾ ಗೂಡ್ಸ್ ಶೆಡ್ ರಸ್ತೆಯ ಮೂಲಕ ಸಾಗಬಹುದು.
ಬನ್ನೇರುಘಟ್ಟ ರಸ್ತೆ ಪರ್ಯಾಯ ವ್ಯವಸ್ಥೆ: ಡೈರಿ ಸರ್ಕಲ್‌ನಿಂದ ಬರುವ ವಾಹನಗಳು ಸಾಗರ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ತಿಲಕ ನಗರ ಮುಖ್ಯ ರಸ್ತೆಯಲ್ಲಿ ಚಲಿಸಿ ಸ್ವಾಗತ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆಯಬೇಕು. ಈಸ್ಟ್ ಎಂಡ್ ಮುಖ್ಯ ರಸ್ತೆಯಲ್ಲಿ ಚಲಿಸಿ, ಈಸ್ಟ್ ಎಂಡ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆಯಬೇಕು. 28ನೇ ಮೈನ್ ಜಂಕ್ಷನ್‌ಲ್ಲಿ ಎಡಕ್ಕೆ ತಿರುವು ಪಡೆದು 8ನೇ ಮೇನ್ ರಸ್ತೆಯಲ್ಲಿ ಚಲಿಸಿ ನೇರ ಡಾಲ್ಕಿಯಾ ಜಂಕ್ಷನ್ ವರೆಗೆ ಚಲಿಸಬೇಕು. ಅಲ್ಲಿ ಎಡಕ್ಕೆ ಹೊರ ರಿಂಗ್ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದು ಜಿ.ಡಿ ಮರ ಜಂಕ್ಷನ್ ಕಡೆಗೆ ಚಲಿಸಿಬೇಕು. ಅಲ್ಲಿ ಬಲಕ್ಕೆ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿದೆ. ಇನ್ನು ಬನ್ನೇರುಘಟ್ಟ ಮುಖ್ಯ ರಸ್ತೆ ಬಿಳೇಕಹಳ್ಳಿ ಕಡೆಯಿಂದ ಡೈರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಜಿ.ಡಿ ಮರ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು, ಹೊರ ರಿಂಗ್ ರಸ್ತೆ ಮೂಲಕ ಸಾಗಬಹುದು.