Advertisement
ಬೆಳಗ್ಗೆ 9 ಗಂಟೆಯಿಂದಲೇ ಮೈಸೂರು, ತುಮಕೂರು, ನೆಲಮಂಗಲ, ಚಿತ್ರದುರ್ಗ, ಹಾಸನ, ರಾಮನಗರ, ಚನ್ನಪಟ್ಟಣ, ಕನಕಪುರ ಸೇರಿ ವಿವಿಧೆಡೆಯಿಂದ ಒಕ್ಕಲಿಗ ಸಮುದಾಯದವರು ಹಾಗೂ ಕಾಂಗ್ರೆಸ್-ಜೆಡಿಎಸ್‌ನ ಸುಮಾರು 25ರಿಂದ 30 ಸಾವಿರ ಮಂದಿ ತಂಡೋಪ ತಂಡವಾಗಿ ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳಲ್ಲಿ ನಗರ ಪ್ರವೇಶಿಸಿದರು.
Related Articles
Advertisement
ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಸಂಚಾರ ನಿರ್ಬಂಧ ಸಹ ಹೇರಲಾಗಿತ್ತು. ಮತ್ತೂಂದೆಡೆ ಬೆಳಗ್ಗೆ 9 ಗಂಟೆಯಿಂದಲೇ ಮೈಸೂರು ರಸ್ತೆ, ತುಮಕೂರು ರಸ್ತೆ ಕಡೆಯಿಂದ ನೂರಾರು ವಾಹನಗಳು ಒಮ್ಮೆಲೆ ನಗರ ಪ್ರವೇಶಿದ್ದರಿಂದ ಈ ಭಾಗದಲ್ಲಿ ನೀರಿಕ್ಷೆಗೂ ಮೀರಿ ಸಂಚಾರ ದಟ್ಟಣೆ ಉಂಟಾಗಿತು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ದಟ್ಟಣೆಯ ಬಿಸಿ ತಟ್ಟಿತು.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಖಾಸಗಿ ಕಂಪನಿಗಳ ಉದ್ಯೋಗಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಹೋಗಲು ಸಾಧ್ಯವಾಗದೆ, ಬದಲಿ ಮಾರ್ಗಗಳಲ್ಲಿ ತೆರಳಲು ಹರ ಸಾಹಸ ಪಟ್ಟರು. ಕೆಲವೆಡೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಆಟೋ ರಿಕ್ಷಾಗಳು ಸಹ ಗಂಟೆಗಟ್ಟಲೇ ರಸ್ತೆಯಲ್ಲೇ ನಿಲ್ಲಬೇಕಾಯಿತು.
ಪ್ರತಿಭಟನೆಯಲ್ಲಿ ಕಂಡಿದ್ದು: ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ನಾಡಪ್ರಭು ಕೆಂಪೇಗೌಡರ ಪೋಷಾಕು ಧರಿಸಿ ಗಮನ ಸೆಳೆದರೆ, ಮತ್ತೂಬ್ಬ ಅರೆಬೆತ್ತಲೆಯಾಗಿ ಕೇಂದ್ರ ವಿರುದ್ಧದ ಘೋಷಣೆಗಳನ್ನು ತನ್ನ ಮೈಮೇಲೆ ಬರೆದುಕೊಂಡಿದ್ದ. ಪ್ರತಿಭಟನಾಕಾರರು ಡಿ.ಕೆ.ಶಿವಕುಮಾರ್ ಭಾವಚಿತ್ರಗಳನ್ನು ಹಿಡಿದು,ಕೇಂದ್ರ ಸರ್ಕಾರ ವಿರುದ್ಧದ ಘೋಷಣೆಗಳಿದ್ದ ಬಿತ್ತಿಪತ್ರಗಳನ್ನು ಹಿಡಿದು ಸಾಗಿದರು.
ಪೊಲೀಸ್ ಬಿಗಿ ಭದ್ರತೆ: ಪ್ರತಿಭಟನೆಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು, ಬೆಂಬಲಿಗರು ಸೇರಿದ್ದರಿಂದ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಉಮೇಶ್ ಕುಮಾರ್, ಎಸ್.ಮರುಗನ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ನ್ಯಾಷನಲ್ ಕಾಲೇಜು ಮೈದಾನದ ಸುತ್ತ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ರಸ್ತೆಯ ಎರಡೂ ಬದಿಗಳಲ್ಲಿ ಕಾನೂನು ಸುವ್ಯವಸ್ಥೆ, ಸಂಚಾರ ಪೊಲೀಸರ ಜತೆ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಮಹಿಳಾ ಸಿಬ್ಬಂದಿ ಸೇರಿ ಸುಮಾರು 200 ಮಂದಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಿದರು. ಪೊಲೀಸರು ಇಡೀ ರ್ಯಾಲಿಯ ಚಿತ್ರೀಕರಣ ಮಾಡಿಕೊಂಡರು. ಸಂಚಾರ ವಿಭಾಗದ ಸಿಬ್ಬಂದಿ ಸೇರಿ ಮೂರೂವರೆ ಸಾವಿರ ಮಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿತರಾಗಿದ್ದರು.
ವ್ಯವಸ್ಥಿತ ನಿರ್ವಹಣೆ: ಪ್ರತಿಭಟನಾ ಮೆರವಣಿಗೆ ನಡೆದ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ಅವಕಾಶ ಮಾಡಿಕೊಟ್ಟ ನಗರ ಪೊಲೀಸರು, ಮುನ್ನಚ್ಚರಿಕೆ ಕ್ರಮವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು. ಜತೆಗೆ, ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟು ಮತ್ತೂಂದು ಬದಿಯ ರಸ್ತೆಯಲ್ಲಿ ಪ್ರತಿಭಟನಾಕಾರರ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ, ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿ ನಡೆದು ಪೊಲೀಸರು ನಿಟ್ಟುಸಿರು ಬಿಡುವಂತಾಯಿತು.