Advertisement

Kunigal ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ : ಶಾಸಕರಿಂದ ಸ್ಥಳ ಪರಿಶೀಲನೆ

06:35 PM Oct 25, 2023 | Team Udayavani |

ಕುಣಿಗಲ್ : ಪಟ್ಟಣದಲ್ಲಿನ ಟ್ರಾಫಿಕ್ ಸಂಬಂಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಡಾ.ಹೆಚ್.ಡಿ ರಂಗನಾಥ್ ಸಂಚಾರಿ ಅವ್ಯವಸ್ಥೆಯನ್ನು ಸರಿಪಡಿಸುವಿಕೆಗೆ ಸಹಕಾರ ನೀಡುವಂತೆ ವರ್ತಕರು ಹಾಗೂ ನಾಗರೀಕರಲ್ಲಿ ಮನವಿ ಮಾಡಿದರು.

Advertisement

ದಿನ ಕಳೆದಂತೆ ಪಟ್ಟಣವು ಬೃಹತ್‌ಕಾರವಾಗಿ ಬೆಳೆಯುತ್ತಿದ್ದು, ಇದರ ಜೊತೆ ವಾಹನಗಳ ಹಾಗೂ ನಾಗರೀಕರ ಸಂಚಾರವು ದುಪ್ಪಟವಾಗಿ ಪಟ್ಟಣದ ಅನೇಕ ಕಡೆಗಳಲ್ಲಿ ಸಂಚಾರಿ ಅವ್ಯವಸ್ಥೆಯಿಂದ ಕೂಡಿದೆ, ಇದರಿಂದ ನಾಗರೀಕರಿಗೆ ಕಿರಿಕಿರಿ ಉಂಟಾಗಿದೆ. ಸಾರ್ವಜನಿಕ ದೂರಿನ ಮೇರೆಗೆ ಬುಧವಾರ ಶಾಸಕ ಡಾ.ಹೆಚ್.ಡಿ ರಂಗನಾಥ್ ವೃತ್ತ ನಿರೀಕ್ಷಕ ನವೀನ್‌ಗೌಡ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರೊಂದಿಗೆ ಪಟ್ಟಣದಲ್ಲಿನ ಸಂಚಾರಿ ಅವ್ಯವಸ್ಥೆಯನ್ನು ಪರಿಶಿಲಿಸಿದರು.

ಸದಾ ಜನ ಹಾಗೂ ವಾಹನಗಳ ದಟ್ಟಣೆಯಿಂದ ಕೂಡಿರುವ ಹಳೆಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆಯ ಎನ್.ಹುಚ್ಚಮಾಸ್ತೇಗೌಡ ವೃತ್ತ, ಗ್ರಾಮದೇವತೆ ಸರ್ಕಲ್, ದೊಡ್ಡಪೇಟೆ, ಸಂತೆ ಬೀದಿ, ಪಿ.ಎಲ್.ಡಿ ಬ್ಯಾಂಕಿನ ಟಿ.ಎಂ ರಸ್ತೆ ಇದರ ಎದುರಿನ ಕೋಟೆಗೆ ಹೋಗುವ ರಸ್ತೆಗಳನ್ನು ಪರಿಶೀಲಿಸಿದರು. ಬಳಿಕ ವರ್ತಕರನ್ನು ಹಾಗೂ ನಾಗರೀಕರನ್ನು ಭೇಟಿ ಮಾಡಿದ ಶಾಸಕರು ಸಂಚಾರಿ ಅವ್ಯವಸ್ಥೆ ಸರಿಪಡಿಸುವ ಸಂಬಂಧ ಅವರೊಂದಿಗೆ ಚರ್ಚೆ ನಡೆಸಿ ಅವರಿಂದ ಅಭಿಪ್ರಾಯ ಪಡೆದರು.

ಸಹಕಾರಕ್ಕೆ ಮನವಿ : ದೊಡ್ಡಪೇಟೆ ಹಾಗೂ ಸಂತೇ ಬೀದಿಯಲ್ಲಿ ವ್ಯಾಪಾರ ವಹಿವಾಟುಗಳು ಅತ್ಯಧಿಕವಾಗಿ ವ್ಯವಹಾರ ನಡೆಯುತ್ತಿದೆ. ಆದರೆ ಈ ಭಾಗದ ರಸ್ತೆಗಳು ಬಹಳ ಕಿರುದಾಗಿರುತ್ತದೆ. ಕಾರು, ದ್ವಿಚಕ್ರ ವಾಹನ ಹಾಗೂ ನಾಗರೀಕರ ಸಂಚಾರಕ್ಕೆ ತೀರ್ವ ತೊಂದರೇ ಉಂಟಾಗಿದೆ. ಹಾಗಾಗೀ ಈ ಮಾರ್ಗ ಏಕಮುಖ ಸಂಚಾರ ವ್ಯವಸ್ಥೆ ಮಾಡಿದರೆ ಹೇಗೆ ಎಂದು ವರ್ತಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಶಾಸಕರು ಸಲಹೆ ಕೇಳಿದರು. ಎತ್ತರ ಇರುವ ರಸ್ತೆಯನ್ನು ಇಳಿಜಾರು ಮಾಡಿ ಪಕ್ಕದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಜತೆಗೆ ವರ್ತಕರಿಗೆ ಶೌಚಾಲಯ ನಿರ್ಮಿಸಿಕೊಡಬೇಕೆಂದು ವರ್ತಕರು ಶಾಸಕರಲ್ಲಿ ಮನವಿ ಮಾಡಿದರು.

ರಸ್ತೆ ಪಕ್ಕ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರಿಗೆ ಶಾಸಕರು ಸೂಚಿಸಿದರು. ಶೌಚಾಲಯ ನಿರ್ಮಾಣಕ್ಕೆ ನಾನು ನನ್ನ ಸ್ವಂತಿಕೆಯಿಂದ ಸ್ವಲ್ಪ ಹಣ ನೀಡುವೇ, ಉಳಿದ ಹಣವನ್ನು ಪುರಸಭೆ ಹಾಗೂ ವರ್ತಕರು ಹಾಕಿಕೊಂಡು ಉತ್ತಮ ಶೌಚಾಲಯವನ್ನು ನಿರ್ಮಾಣ ಮಾಡಿಕೊಳ್ಳುವಂತೆ ಡಾ. ರಂಗನಾಥ್ ತಿಳಿಸಿದರು.

Advertisement

ರಸ್ತೆ ಬದಿ ವ್ಯಾಪಾರಿಗಳು ನಿಯಮ ಮೀರಿ ರಸ್ತೆಯಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ. ಗ್ರಾಹಕರು, ನಾಗರೀಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಬದಿಯ ದೂರ ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುವಂತೆ ವ್ಯಾಪಾರಿಗಳಲ್ಲಿ ಮನವಿ ಮಾಡಿದರು. ಶೀಘ್ರದಲ್ಲೇ ರಸ್ತೆಗೆ ಮಾರ್ಕಿಂಗ್ ಹಾಕಿಲಾಗುವುದು. ಇದನ್ನು ಅನುಸರಿಸುವಂತೆ ತಿಳಿಸಿದರು. ಬಳಿಕ ಆಟೋ ರಿಕ್ಷಾ ಚಾಲಕರು, ಸಣ್ಣಪಟ್ಟ ವ್ಯಾಪಾರಿಗಳ ಸಮಸ್ಯೆಗಳನ್ನು ಶಾಸಕರು ಕೇಳಿದರು.

ಸಿಗ್ನಲ್ ಲೈಟ್ ಅಳವಡಿಕೆ : ಮೂರು ರಸ್ತೆಗಳು ಕೂಡಿರುವ ಎನ್.ಹುಚ್ಚಮಾಸ್ತಿಗೌಡ ಸರ್ಕಲ್ ಹಾಗೂ ಗ್ರಾಮದೇವತೆ ವೃತ್ತ ಬಳಿ ವಾಹನಗಳ ಸಂಚಾರ ದುಪ್ಪಟವಾಗಿರುವ ಕಾರಣ ಈ ಎರಡು ಕಡೆ ಸಿಗ್ನಲ್ ಲೈಟ್ ಅಳವಡಿಕೆಗೆ ಸಂಬಂಧ ಲೋಕೋಪಯೋಗಿ ಇಲಾಖೆ, ಪೋಲಿಸ್ ಇಲಾಖೆ, ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಿಗ್ನಲ್ ಲೈಟ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕರು ತಿಳಿಸಿದರು.

ಸಭೆ : ಸಂಚಾರಿ ಅವ್ಯವಸ್ಥೆ ಹಾಗೂ ಸಿಗ್ನಲ್ ಲೈಟ್ ಅಳವಡಿಸುವ ಸಂಬಂಧ ಆ 26 ರ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ವರ್ತಕರ, ಬೀದಿ ಬದಿ ವ್ಯಾಪಾರಿಗಳ ಹಾಗೂ ನಾಗರೀಕರ ಸಭೆಯನ್ನು ಶಾಸಕರು ಕರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next