Advertisement
ಇದಕ್ಕೆ ಕಾರಣ ಕಲ್ಯಾಣ ಮಂಟಪಗಳಲ್ಲಿ ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದು. ಇದು ಒಂದೆರಡು ದಿನಗಳ ಸಮಸ್ಯೆಯಲ್ಲ. ಪ್ರತಿ ವರ್ಷ ಮದುವೆ ಸಂದರ್ಭದಲ್ಲಿ ಇಂತಹ ಸಮಸ್ಯೆ ಸಾಮಾನ್ಯ. ಗಣ್ಯರು, ರಾಜಕೀಯ ಮುಖಂಡರ ಮದುವೆ ಕಾರ್ಯಕ್ರಮಗಳಲ್ಲಿ ಈ ಸಮಸ್ಯೆ ದುಪ್ಪಟ್ಟಾಗುತ್ತದೆ. ಕಲ್ಯಾಣ ಮಂಟಪ, ಪಾರ್ಟಿಹಾಲ್‌ಗಳಿರುವ ರಸ್ತೆಗಳಲ್ಲಿ ಪೀಕ್ ಅವರ್ ಮಾತ್ರವಲ್ಲ ನಾನ್ ಪೀಕ್ ಅವರ್‌ನಲ್ಲೂ ವಾಹನಗಳ ಓಡಾಟ ದುಸ್ತರವಾಗಿರುತ್ತದೆ.
Related Articles
Advertisement
ನೋಟಿಸ್ ಜಾರಿ: ಕಲ್ಯಾಣ ಮಂಟಪಗಳಲ್ಲಿ ವಾಹನ ಪಾರ್ಕಿಂಗ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಬಿಬಿಎಂಪಿಯನ್ನು ಕೋರಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದ ಕಲ್ಯಾಣ ಮಂಟಪಗಳಿಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ. ಈ ಮಧ್ಯೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ಸಭೆ ಕೂಡ ನಡೆಸಿದ್ದೇವೆ. ಈ ವೇಳೆ ತಾವೇ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಕೆಲ ಕಲ್ಯಾಣ ಮಂಟಪ ಮಾಲೀಕರು ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದು, ಭದ್ರತಾ ಸಿಬ್ಬಂದಿ ನಿಯೋಜಿಸಿಕೊಂಡಿದ್ದಾರೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಪಾರ್ಕಿಂಗ್ ಪಾಲಿಸಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾರ್ಕಿಂಗ್ ನೀತಿ (ಪಾಲಿಸಿ) ಜಾರಿಗೆ ತರಲು ಮನವಿ ಮಾಡಲಾಗಿದ್ದು, ಈ ಕುರಿತು ಸರ್ಕಾರ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ. ಈ ನೀತಿ ಜಾರಿಯಾದರೆ ಕಲ್ಯಾಣ ಮಂಟಪಗಳು ಮಾತ್ರವಲ್ಲ. ವಾಣಿಜ್ಯ ಕಟ್ಟಡಗಳ ಮಾಲೀಕರೂ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಟ್ಟಡ ಮಾಲೀಕರಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಚಿಸಬೇಕಿದೆ. ಇದೇ ವೇಳೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತೂ ನೀತಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಸಿಬಿಡಿಯಲ್ಲೂ ಪಾರ್ಕಿಂಗ್ ಸಮಸ್ಯೆ : ಇತ್ತೀಚೆಗಷ್ಟೇ ಸರ್ಕಾರದ ಸೂಚನೆ ಮೇರೆಗೆ ಸಂಚಾರ ಪೊಲೀಸರು ಹೈ-ಡೆನ್ಸಿಟಿ ಕಾರಿಡಾರ್ ಹಾಗೂ ಸಿಬಿಐಡಿ ಪ್ರದೇಶವನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ. ಈ ಪ್ರದೇಶಗಳಲ್ಲಿರುವ ಕೆಲ ಕಲ್ಯಾಣ ಮಂಟಪಗಳಲ್ಲೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದ್ದರೂ ಹೆಚ್ಚುವರಿ ವಾಹನಗಳು ಸಮೀಪದ ರಸ್ತೆಗಳಲ್ಲೇ ನಿಲ್ಲುತ್ತವೆ. ಉದಾಹರಣೆಗೆ ಅರಮನೆ ಮೈದಾನದಲ್ಲಿ ಹತ್ತಾರು ಕಲ್ಯಾಣ ಮಂಟಪಗಳಿವೆ. ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಇಲ್ಲಿ ಗಣ್ಯರು. ಅತೀ ಗಣ್ಯರ ಮದುವೆಗಳು ನಡೆಯುತ್ತವೆ. ಹೀಗಾಗಿ ಕಾರುಗಳ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ, ಈ ಮಾರ್ಗದ ರಸ್ತೆಗಳು ಕಿರಿದಾಗಿವೆ. ಮದುವೆ ಆರಂಭ ಮತ್ತು ಮುಕ್ತಾಯದ ಬಳಿಕ ಒಮ್ಮಲೇ ಹತ್ತಾರು ವಾಹನಗಳು ರಸ್ತೆಗಿಳಿಯುತ್ತವೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ನಿರ್ವಹಣೆಯೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸಂಚಾರ ಪೊಲೀಸರು.
-ಮೋಹನ್ ಭದ್ರಾವತಿ