Advertisement

ಸುರಕ್ಷತೆಗೆ ಸಂಚಾರ ನಿಯಮ ಪಾಲಿಸಿ: ನ್ಯಾ|ಸುಬ್ರಹ್ಮಣ್ಯ

06:11 PM Oct 23, 2021 | Team Udayavani |

ಕಲಬುರಗಿ: ರಸ್ತೆ ಅಪಘಾತಗಳಿಂದ ಪಾರಾಗಲು ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ತಪ್ಪದೆ ಪಾಲನೆ ಮಾಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯ ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ಪೊಲೀಸ್‌ ಆಯುಕ್ತಾಲಯ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಸಂಚಾರ ಕಾನೂನು ಅರಿವು ಮೂಡಿಸಲು ಶುಕ್ರವಾರ ನಗರದಲ್ಲಿ ನಡೆದ ಸಂಚಾರ ಕಾನೂನು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ಚಾಲನೆ ಸಂದರ್ಭದಲ್ಲಿ ಚಾಲಕರು, ಸವಾರರು ತಮ್ಮ ಹಾಗೂ ಕುಟುಂಬದವರ ಯೋಗಕ್ಷೇಮ, ಸುರಕ್ಷತೆ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದರು.

ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಮೈಮರೆತರೆ ಅಪಾಯ ತಪ್ಪಿದ್ದಲ್ಲ. ಸಂಚಾರ ಕಾನೂನುಗಳ ಕುರಿತು ಕೇವಲ ಗೋಡೆ ಬರಹ, ಇಲ್ಲವೇ ಘೋಷಣೆ ಕೂಗಿದರೆ ಸಾಲದು, ಎಲ್ಲರೂ ಚಾಚು ತಪ್ಪದೆ ಪರಿಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಮದ್ಯಪಾನ ಸೇವಿಸಿ ಚಾಲನೆ ಮಾಡಬಾರದು. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ರಸ್ತೆ ಹಾಗೂ ಚಾಲನೆ ಕಡೆಗೆ ಗಮನ ಕೇಂದ್ರಿಕೃತಗೊಳಿಸಿರಬೇಕು. ಅಪಘಾತ ಸಂಭವಿಸಿದಾಗ ನೊಂದವರಿಗೆ ಬೇಗನೆ ಪರಿಹಾರ ನೀಡುವಂತಾಗಲು ಪೊಲೀಸರ ಕಾರ್ಯವೂ ಪ್ರಮುಖವಾಗಿದೆ. ಎಫ್ಐಆರ್‌ ಇನ್ನಿತರ ದಾಖಲೆಗಳನ್ನು ನ್ಯಾಯಾಲಯಗಳಿಗೆ ಈ-ಮೇಲ್‌ ಮೂಲಕ ಸಲ್ಲಿಸಲು ಸುಪ್ರೀಂಕೋರ್ಟ್‌ ಅವಕಾಶ ಕಲ್ಪಿಸಿದೆ. ಹೀಗಾಗಿ ಅದನ್ನು ಬಳಸಿಕೊಂಡು ಬೇಗನೆ ನೆರವು ಸಿಗುವಂತೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌.ರವಿಕುಮಾರ ಮಾತನಾಡಿ, ಬೇರೆ ತಪ್ಪುಗಳನ್ನು ಮಾಡಿದರೆ ತಿದ್ದಿಕೊಳ್ಳಲು ಅವಕಾಶವಿರುತ್ತದೆ. ಆದರೆ, ಒಮ್ಮೆ ಅಪಘಾತ ಸಂಭವಿಸಿ ಅದರಿಂದ ಹಾನಿ ಭರಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತು ವಾಹನ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ| ಸುಶಾಂತ್‌ ಚೌಗಲೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ ಮಾತನಾಡಿದರು. ಜಿಲ್ಲಾ ನ್ಯಾಯಾಲಯದಿಂದ ಆರಂಭವಾದ ಜಾಥಾ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದ ವರೆಗೆ ನಡೆಯಿತು. ನಂತರ ವಾಹನ ಸವಾರರಿಗೆ ಸಂಚಾರ ಅರಿವು ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು.

ಜಾಥಾದಲ್ಲಿ ನಗರ ಉಪ ಪೊಲೀಸ್‌ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಸುಧಾ ಆದಿ, ಇನ್‌ಸ್ಪೆಕ್ಟರ್‌ಗಳಾದ ಶಾಂತಿನಾಥ ಬಿ.ಪಿ., ಅಮರೇಶ, ಪಿಎಸ್‌ ಐಗಳಾದ ಭಾರತಿ ಧನ್ನಿ, ಸುವರ್ಣ ಹಾಗೂ ಪೊಲೀಸ್‌ ಸಿಬ್ಬಂದಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಕಾರಣ ಶಾಲೆ-ಕಾಲೇಜುಗಳು ಆರಂಭವಾಗಿವೆ. ಇದರಿಂದ ವಾಹನಗಳ ಸಂಚಾರ ದಟ್ಟಣೆಯೂ ಹೆಚ್ಚಿದೆ. ಹೀಗಾಗಿ ಸಂಚಾರ ನಿಯಮ ಪಾಲಿಸಬೇಕು. ವಾಹನಗಳ ಚಾಲನೆ ಮಾಡುವಾಗ ಬೇರೆಡೆ ಲಕ್ಷ್ಯ ಇರಬಾರದು. ಡಾ| ವೈ.ಎಸ್‌.ರವಿಕುಮಾರ, ಆಯುಕ್ತ, ನಗರ ಪೊಲೀಸ್

Advertisement

Udayavani is now on Telegram. Click here to join our channel and stay updated with the latest news.

Next