ಬೆಂಗಳೂರು: ವಾಹನ ಸವಾರರ ಸುರಕ್ಷತೆಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದ ನಗರ ಸಂಚಾರ ಪೊಲೀಸರು, ಇದೀಗ ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳಲ್ಲಿ ಇರಿಸಿರುವ ಅನಗತ್ಯ ವಸ್ತುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರ ಸೂಚನೆ ಮೇರೆಗೆ ದಕ್ಷಿಣ ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ಎನ್.ರಮೇಶ್ ಹಾಗೂ ಕುಮಾರಸ್ವಾಮಿ ಲೇಔಟ್ ಇನ್‌ಸ್ಪೆಕ್ಟರ್ ಎಂ.ಎ.ವಸಂತ್ ನೇತೃತ್ವದಲ್ಲಿ ಗುರುವಾರ ಸಾರಕ್ಕಿ ಜಂಕ್ಷನ್‌ನಿಂದ ಕದಿರೇನಹಳ್ಳಿ ಅಂಡರ್‌ಪಾಸ್‌ವರೆಗೆ ಪಾದಚಾರಿ ಮಾರ್ಗದಲ್ಲಿ ಇರಿಸಲಾಗಿದ್ದ ವಸ್ತುಗಳನ್ನು ತೆರವುಗೊಳಿಸಲಾಯಿತು.
ಮಧ್ಯಾಹ್ನ 12.30ರಿಂದ 3 ಗಂಟೆವರೆಗೆ ಬಿಬಿಎಂಪಿ ಸದಸ್ಯರಾದ ಅನ್ಸರ್ ಪಾಷಾ ಮತ್ತು ಬಾಲಕೃಷ್ಣ ಹಾಗೂ ಪಾಲಿಕೆಯ ಎಂಜಿನಿಯರ್‌ಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಪಾದಚಾರಿ ಮಾರ್ಗದಲ್ಲಿ ಹರಡಿದ್ದ ಕಸ, ಮರದ ಪಿಠೊಪಕರಣಗಳು, ಮರದ ತುಂಡುಗಳು ಹಾಗೂ ಇತರೆ ಎಲ್ಲ ವಸ್ತುಗಳನ್ನು ತೆರವುಗೊಳಿಸಿದರು. ಅಲ್ಲದೆ, ಅಂಗಡಿ ಮಾಲೀಕರಿಗೆ ಪಾದಚಾರಿ ಮಾರ್ಗಗಳಲ್ಲಿ ವಸ್ತುಗಳನ್ನು ಹಾಕಿಕೊಳ್ಳುವುದರಿಂದ ಆಗುವ ತೊಂದರೆಗಳ ಬಗ್ಗೆ ವಿವರಿಸಿದ್ದು, ಕೆಲವರು ಸ್ವಯಂ ಪ್ರೇರಿತವಾಗಿಯೇ ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸಿದರು. ಇನ್ನು ಕೆಲವರಿಗೆ ನಾಲ್ಕು ದಿನಗಳ ಗಡುವು ಕೊಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಎರಡು ಮೀಟರ್‌ಗೆ ಒಂದು ಗಿಡ: ಸದ್ಯ ತೆರವುಗೊಳಿಸಿರುವ ಜಾಗದಲ್ಲಿ ಮುಂದಿನ ವಾರದಲ್ಲಿ ಪ್ರತಿ ಎರಡರಿಂದ ಮೂರು ಮೀಟರ್‌ಗೆ ಒಂದು ಗಿಡ ನೆಡಲಾಗುತ್ತದೆ. ಈ ಮೂಲಕ ಪರಿಸರ ಕಾಳಜಿ ಜತೆಗೆ ಪಾದಚಾರಿಗಳ ಓಡಾಡಕ್ಕೂ ಅನುಕೂಲ ಮಾಡಿಕೊಡಲಾಗುತ್ತದೆ. ಒಂದು ವೇಳೆ ತೆರವುಗೊಳಿಸಿರುವ ಜಾಗದಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಿ ನಿಯಮ ಉಲ್ಲಂಘನೆ ಮಾಡಿದರೆ, ಅಂತಹ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುದು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದರು.