ಬೆಂಗಳೂರು: ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿಗೆ ವೀಲ್ ಕ್ಲಾಂಪ್ ಅಳವಡಿಸಿದ್ದಕ್ಕೆ ಸಂಚಾರ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಮಾಲೀಕ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಬಾಣಸವಾಡಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಉಮೇಶ್ ನೀಡಿದ ದೂರಿನ ಮೇರೆಗೆ ಕೆ.ಎ.04-ಎಂಎಲ್ 7075 ಕಾರು ಮಾಲೀಕ ಹಾಗೂ ಇತರೆ ಮೂವರು ಅಪರಿಚಿತರ ವಿರುದ್ಧ ಕೇಸ್ ದಾಖಲಾಗಿದೆ. ಕಾನ್‌ಸ್ಟೇಬಲ್ ಉಮೇಶ ಮತ್ತು ಎಎಸ್‌ಐ ನಾರಾಯಣಸ್ವಾಮಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ 6 ಗಂಟೆ ಸುಮಾರಿಗೆ ಎಚ್‌ಆರ್‌ಬಿಆರ್
ಲೇಔಟ್‌ನ 5ನೇ ಮುಖ್ಯರಸ್ತೆಯಲ್ಲಿ ಈ ವೇಳೆ ಕಾರು ಮಾಲೀಕ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಾನೆ. ಅದನ್ನು ಗಮನಿಸಿದ ಉಮೇಶ್ ಕಾರಿಗೆ ವೀಲ್ ಕ್ಲಾಂಪ್ ಹಾಕಿದ್ದಾರೆ.
ಕೆಲ ಹೊತ್ತಿನ ಬಳಿಕ ಉಮೇಶ್‌ಗೆ ಕರೆ ಬಂದಿದ್ದು, ತಮ್ಮ ಜತೆ ಇರುವ ಮಹಿಳೆಗೆ ತೊಂದರೆ ಆಗಿದ್ದು, ಕೂಡಲೇ ಸ್ಥಳಕ್ಕೆ ಬಂದು ಕ್ಲಾಂಪ್ ತೆಗೆಯುವಂತೆಕೋರಿ ದ್ದಾರೆ. ಹೀಗಾಗಿ ಎಎಸ್‌ಐ ನಾರಾಯಣಸ್ವಾಮಿ ಜತೆ ಸ್ಥಳಕ್ಕೆ ಬಂದ ಉಮೇಶ್, ಮೇಲೆ ಏಕಾಏಕಿ ಇಬ್ಬರು ಪುರುಷರು ಮತ್ತು ಮಹಿಳೆಯರು ಜಗಳ ತೆಗೆದು, ಏಕೆ ಕ್ಲಾಂಪ್ ಹಾಕಿದ್ದಿರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅದಕ್ಕೆ ಉಮೇಶ್, ನಿಷೇಧಿತ ಪ್ರದೇಶದಲ್ಲಿ ಕಾರು ನಿಲ್ಲಿಸಿ ದ್ದಿರಾ? ಹೀಗಾಗಿ ಕ್ಲಾಂಪ್ ಹಾಕಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಆಕ್ರೋಶಗೊಂಡ ಇಬ್ಬರು ಪುರುಷರು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯರು ಕೂಡ ಅದಕ್ಕೆ ಸಹಕಾರ ನೀಡುತ್ತಿದ್ದರು. ಹೀಗಾಗಿ ತಮ್ಮ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಉಮೇಶ್ ದೂರಿನಲ್ಲಿ ಕೋರಿದ್ದಾರೆ. ಕಾರು ಮಾಲೀಕನ ಪತ್ತೆಯಾಗಿದ್ದು, ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.