Advertisement
ಬೆಳಗಾವಿ: ಅಧಿವೇಶನಕ್ಕಾಗಿ ಮುಖ್ಯಮಂತ್ರಿ ಬೆಳಗಾವಿಗೆ ಕಾಲಿಟ್ಟಿರುವುದು ಈ ಭಾಗದ ಜನರಿಗೆ ಖುಷಿ ಕೊಟ್ಟರೆ ಸಂಚಾರಿ ಪೊಲೀಸರಿಗೆ ಮಾತ್ರ ತಲೆ ನೋವಾಗಿ ಪರಿಣಮಿಸಿದೆ. ಹಳೆಯ ವಾಕಿಟಾಕಿಗಳ ಸಹಾಯದಿಂದ ಇದ್ದಿದ್ದರಲ್ಲಿಯೇ ಮುಖ್ಯಮಂತ್ರಿ, ಸಚಿವರು ಹಾಗೂ ಗಣ್ಯರ ಸಂಚಾರದ ವೇಳೆ ದಟ್ಟಣೆ ತಡೆಯಲು ಹರಸಾಹಸ ಪಡುತ್ತಿರುವ ಪೊಲೀಸರು ಜೀರೋ ಟ್ರಾಫಿಕ್‌ಗೆ ಕಡಿವಾಣ ಹಾಕಲು ಸಾಧ್ಯವೇ ಆಗುತ್ತಿಲ್ಲ.
Related Articles
Advertisement
ವಿಟಿಯು ಗೆಸ್ಟ್ ಹೌಸ್ ತಲೆಬಿಸಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದರು. ನಂತರದಲ್ಲಿ ವಾಸ್ತು ಲೆಕ್ಕಾಚಾರದಿಂದಾಗಿ ವಾಸ್ತವ್ಯವನ್ನು ವಿಟಿಯು ಗೆಸ್ಟ್ ಹೌಸ್‌ಗೆ ಬದಲಾಯಿಸಲಾಯಿತು. ನಗರದಿಂದ ಸುಮಾರು 10-12 ಕಿ.ಮೀವರೆಗೆ ಸಂಚಾರ ನಿಯಂತ್ರಿಸಲು ಪೊಲೀಸರಿಗೆ ಸಾಹಸವೇ ಆಗಿದೆ. ಸುವರ್ಣ ವಿದಾನಸೌಧದಿಂದ ನೇರವಾಗಿ ವಿಟಿಯು ಗೆಸ್ಟ್ ಹೌಸ್‌ಗೆ ಹೋಗಲು ಅಂದಾಜು 20 ನಿಮಿಷ ಬೇಕಾಗುತ್ತದೆ. ಸರಿಯಾದ ವಾಕಿಟಾಕಿಗಳು ಇದ್ದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ಪ್ರವಾಸಿ ಮಂದಿರದಲ್ಲಿಯೇ ಸಿಎಂ ವಾಸ್ತವ್ಯ ಹೂಡಿದ್ದರೆ ಸಂಚಾರ ದಟ್ಟಣೆಯ ತಲೆಬಿಸಿಯೇ ಆಗುತ್ತಿರಲಿಲ್ಲ. ನಗರ ಪ್ರವೇಶದಿಂದ ಗಾಂಧಿ ನಗರ, ಕೋಟೆ ಕೆರೆಯಿಂದ ನೇರವಾಗಿ ಇಲ್ಲಿ ತಲುಪಬಹುದಾಗಿತ್ತು. ಟ್ರಾಫಿಕ್ ಸಮಸ್ಯೆ ಹಾಗೂ ಜನರಿಗೆ ಅನಾನುಕೂಲ ಆಗುತ್ತಿರಲಿಲ್ಲ. ವಿಟಿಯು ಗೆಸ್ಟ್‌ಹೌಸ್ ವರೆಗೆ ಅಲ್ಲಲ್ಲಿ ಪೊಲೀಸರು ನಿಂತು ಜನರನ್ನು ತಡೆದು ವಾದಕ್ಕಿಳಿಯುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಜತೆಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಲೂ ವಾಹನಗಳು ಕಾಂಗ್ರೆಸ್ ರಸ್ತೆ ಮೇಲೆಯೇ ಓಡಾಡುತ್ತಿವೆ. ಒಂದು ವೇಳೆ ಗಣ್ಯರ ವಾಹನ ಬಂದರೆ ಮೊದಲ ರೈಲ್ವೆ ಗೇಟ್, ಮೂರನೇ ರೈಲ್ವೆ ಗೇಟ್, ಪೀರನವಾಡಿ ಕಡೆಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಜೀರೋ ಟ್ರಾಫಿಕ್ ನಿಯಂತ್ರಣ ಆಗಲಿಲ್ಲ: ವಿಐಪಿಗಳಿಗಾಗಿ ಜೀರೋ ಟ್ರಾಫಿಕ್ ಸೃಷ್ಟಿ ಮಾಡುವುದು ಬೇಡವೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ನಗರ ದಾಟಿಯೇ ತಮ್ಮ ವಾಸ್ತವ್ಯ ಸ್ಥಳಕ್ಕೆ ತೆರಳಬೇಕಿರುವುದು ಸಮಸ್ಯೆ ಸೃಷ್ಟಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಫ್ರಿಕ್ವೆನ್ಸಿ ಕಡಿಮೆ ಇರುವುದರಿಂದ ಆ ಕಡೆಯಿಂದ ಬರುವ ಸಂದೇಶ ಸರಿಯಾಗಿ ಕೇಳಿಸುತ್ತಿಲ್ಲ. ಹೀಗಾಗಿ ಸಂಚಾರಿ ಪೊಲೀಸರು ತಮ್ಮ ಮುಂದಿನ ಜಾಗದಲ್ಲಿ ಇರುವ ಪೇದೆಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮಾಹಿತಿ ರವಾನಿಸುತ್ತಿದ್ದಾರೆ.
ಭೈರೋಬಾ ಕಾಂಬಳೆ