ಸಾಗರ : ನಗರದ ಸಂಚಾರಿ ಅವ್ಯವಸ್ಥೆಗೆ ಖುದ್ದಾಗಿ ಐಪಿಎಸ್ ಅಧಿಕಾರಿ, ನಗರದ ಎಎಸ್‌ಪಿ ರೋಹನ್ ಜಗದೀಶ್ ಅಖಾಡಕ್ಕಿಳಿದಿದ್ದು, ಬುಧವಾರ ಸಂಚಾರಿ ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಿರುವ ವಾಹನಗಳಿಗೆ ಲಾಕ್ ಹಾಕಿಸುವ ಮೂಲಕ ಬಿಸಿ ಮುಟ್ಟಿಸಿದರು.
ನಗರದಲ್ಲಿ ಕಳೆದ 7-8 ತಿಂಗಳುಗಳಿಂದ ಪಿಸಿಆರ್ ವಾಹನವಿಲ್ಲದೆ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳಿಗೆ ಲಾಕ್ ಹಾಕುವುದನ್ನು ನಿಲ್ಲಿಸಿದ್ದರಿಂದ ಜನ ಬೇಕಾಬಿಟ್ಟಿ ವಾಹನಗಳ ಪಾರ್ಕಿಂಗ್ ಮಾಡುವುದು ಮತ್ತೆ ರೂಢಿಗೆ ಬಂದಿತ್ತು. ಇತ್ತೀಚೆಗೆ ಜವಳಿ ವರ್ತಕ ಸಂಘ ಡಿವೈಎಸ್ಪಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಸಂಚಾರಿ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೋಹನ್ ಜಗದೀಶ್ ಸ್ವತಃ ಬೆಳಿಗ್ಗೆ 9.30ರಿಂದ ನಗರದಲ್ಲಿ ಸಂಚರಿಸಿ ಸಂಚಲನ ಮೂಡಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನ ತೆರಿಗೆ ಪಾವತಿಸಬೇಕು, ದಂಡ ಪಾವತಿಸುವಂತಾಗಬಾರದು, ರಸ್ತೆ ನಿಯಮಗಳ ಕುರಿತು ಜಾಗೃತೆಯಿಂದ ನಡೆದುಕೊಂಡಲ್ಲಿ ದಂಡ ಪಾವತಿಸುವ ಪ್ರಮೇಯವೇ ಇರುವುದಿಲ್ಲ. ಸಂಚಾರಿ ನಿಯಮಗಳಲ್ಲಿ ಸರ್ಕಾರ ಮಹತ್ವದ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ವಾಹನಗಳಿಗೆ ಲಾಕ್ ಮಾಡಿದರೆ ಸಾವಿರ ರೂ.ಗಳ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಅತ್ರಾಡಿ -ಮದಗ ತಾಯಿ ಮಗಳ ಜೋಡಿ ಕೊಲೆ ಪ್ರಕರಣ : ಘಟನೆ ನಡೆದ 48 ಗಂಟೆಯೂಳಗೆ ಆರೋಪಿಯ ಬಂಧನ
ದ್ವಿಚಕ್ರ ವಾಹನದ ಸವಾರರು ಹೆಲ್ಮೆಟ್ ಧರಿಸುವುದು ಅವರ ಕುಟುಂಬದ ಹಿತದೃಷ್ಠಿಯಿಂದ ಎಂಬ ಕಲ್ಪನೆ ಇರಬೇಕು. ಪೊಲೀಸರನ್ನು ಕಂಡಾಗ ಮಾತ್ರ ಹೆಲ್ಮೆಟ್ ಧರಿಸಬೇಕು ಎಂಬ ಯೋಚನೆ ಸರಿಯಲ್ಲ. ಕಾನೂನುಗಳು ನಿಯಮಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಎಂಬ ಅರಿವು ಮೂಡಿದಾಗ ಮಾತ್ರ ದಂಡವಿಲ್ಲದ ಸುರಕ್ಷಿತ ಸಂಚಾರ ಸಾಧ್ಯ ಎಂದು ವಾಹನ ಸವಾರರುಗಳಿಗೆ ಕರೆ ನೀಡಿದರು.
ವರ್ತಕರು ಸಂಚಾರಿ ಸಮಸ್ಯೆ ನಿವಾರಣೆಗೆ ಸ್ಪಂದಿಸಬೇಕು. ರಸ್ತೆ ಮೇಲೆ ಸಾಮಗ್ರಿಗಳನ್ನು ಜೋಡಿಸುವುದನ್ನು ಕೈಬಿಡಬೇಕು. ಅಂಗಡಿಗಳ ಮುಂದೆ ಕಬ್ಬಿಣದ ಸ್ಟ್ಯಾಂಡ್ ಚಿಕ್ಕದಾಗಿ ಅಳವಡಿಸಿಕೊಳ್ಳುವ ಬದಲಿಗೆ 2 ಅಡಿಗಿಂತ ದೊಡ್ಡ ಸ್ಟ್ಯಾಂಡ್‌ಗಳನ್ನು ಇಡುವುದರಿಂದ ವಾಹನ ನಿಲುಗಡೆಗೆ ಅಡಚಣೆಯಾಗುತ್ತದೆ ಎಂಬ ಅರಿವಿನಿಂದ ನೀವೇ ತೆರವುಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.