Advertisement

ಮರಳು ಲಾರಿಗಳ ಓಡಾಟ: ಸವಾರರಿಗೆ ಸಂಕಷ್ಟ

05:56 AM Mar 08, 2019 | Team Udayavani |

ನಗರ : ಮರಳು, ಮಣ್ಣು ಸಾಗಾಟದ ಲಾರಿಗಳ ಅಕ್ರಮ ಓಡಾಟದಿಂದ ದ್ವಿಚಕ್ರ ವಾಹನ ಸವಾರರು ಸಂಕಷ್ಟು ಅನುಭವಿಸುವಂತಾಗಿದೆ. ಲೋಡ್‌ ಲಾರಿಗಳ ಮೇಲೆ ಟಾರ್ಪಾಲು ಹೊದಿಸದೇ ಇರುವುದೇ ಸಮಸ್ಯೆಗೆ ಮೂಲ ಕಾರಣ.

Advertisement

ಮರಳು ಹಾಗೂ ಮಣ್ಣು ಸಾಗಾಟದ ಲಾರಿಗಳು, ಲೋಡ್‌ ಕೊಂಡೊಯ್ಯುವಾಗ ಮೇಲ್ಗಡೆ ಟಾರ್ಪಾಲು ಹೊದಿಸಿಯೇ ಸಾಗಾಟ ಮಾಡಬೇಕು ಎನ್ನುವ ನಿಯಮವಿದೆ. ಇದರ ಬಗ್ಗೆ ಹಿಂದೊಮ್ಮೆ ಕ್ರಮ ಕೈಗೊಳ್ಳುವ ಕಾಯಕಕ್ಕೂ ಪೊಲೀಸರು ಮುಂದಾಗಿದ್ದರು. ಆದರೆ ಇದೀಗ ಕ್ರಮ ಕೈಗೊಳ್ಳುವ ಕಾರ್ಯ ನಿಂತು ಹೋಗಿದೆ. ಪರಿಣಾಮ ಲಾರಿಗಳ ಬೇಕಾಬಿಟ್ಟಿ ವರ್ತನೆ ಮುಂದುವರಿದಿದೆ.

ಲೋಡ್‌ ಲಾರಿ ವೇಗವಾಗಿ ಸಾಗುವಾಗ ಮಣ್ಣು ಅಥವಾ ಮರಳು ಎರಚುವುದು ಸಾಮಾನ್ಯ. ಹಿಂಬದಿಯಿಂದ ಬರುತ್ತಿರುವ ದ್ವಿಚಕ್ರ, ತ್ರಿಚಕ್ರ ವಾಹನಗಳ ಸವಾರರಿಗೆ ಇದೇ ದೊಡ್ಡ ಅಪಾಯ. ಮುಖಕ್ಕೆ ಮಣ್ಣು ಅಥವಾ ಮರಳು ಬಿದ್ದರೆ, ಅಪಘಾತ ತಪ್ಪಿದ್ದಲ್ಲ. ಎಷ್ಟೋ ಸಂದರ್ಭದಲ್ಲಿ ಲಾರಿ ಗಳ ಹಿಂಭಾಗದಿಂದ ಹೋಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ಜಲ್ಲಿ ಕಲ್ಲುಗಳು ಅಥವಾ ಮರಳಿನ ಜತೆಗೆ ಬರುವ ದೊಡ್ಡ ಹರಳುಗಳು ವಾಹನಗಳ ಗಾಜಿನ ಮೇಲೆ ಬಿದ್ದರೂ ಗಾಜು ಒಡೆಯುತ್ತದೆ. ಮರಳಿನ ಕಣಗಳು ಸಿಡಿದು ಸವಾರರ ಮೈಗೆ ಸೂಜಿಗಳಿಂದ ಚುಚ್ಚಿದಂತಹ ಅನುಭವ ಆಗುತ್ತಿದೆ.

ಅಪಾಯಕಾರಿ ರಾಡ್‌
ರಾಡ್‌ಗಳನ್ನು ಸಾಗಿಸುವ ಲಾರಿಗಳು ನಿಯಮವನ್ನು ಉಲ್ಲಂಘಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಕೆಲ ಲಾರಿಗಳಲ್ಲಿ ಲೋಡ್‌ ಮಾಡಿರುವ ರಾಡ್‌ಗಳು ಹೊರ ಭಾಗಕ್ಕೆ ಚಾಚಿಕೊಂಡಿರುತ್ತವೆ. ರಾತ್ರಿ ಸಮಯವಂತೂ ಇವು ಗಮನಕ್ಕೆ ಬರುವುದಿಲ್ಲ. ಹಿಂಬದಿಯಿಂದ ಬರುವ ವಾಹನಗಳಿಗೆ ಇದು ತೀರಾ ಅಪಾಯಕಾರಿ. ರಾಡ್‌ ಇರುವುದು ಸ್ಪಷ್ಟವಾಗಿ ಕಾಣುವಂತೆ ಲೇಸರ್‌ ಪಟ್ಟಿ, ಕೆಂಪು ಬಟ್ಟೆ ಅಥವಾ ಸ್ಟಿಕ್ಕರ್‌ಗಳನ್ನು ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಗತ್ಯವಿದೆ.

ಕಣ್ಣ ಮುಂದೆಯೇ ಅಪಘಾತ
ಮಣ್ಣು, ಮರಳು ತುಂಬಿದ ಲಾರಿಗಳು ಟಾರ್ಪಾಲು ಹೊದಿಸದೇ ಸಾಗಾಟ ಮಾಡುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತುಂಬಾ ತೊಂದರೆ ಆಗಿದೆ. ನನ್ನ ಕಣ್ಣ ಮುಂದೆ ಅಪಘಾತ ನಡೆದಿರುವುದನ್ನು ಕಂಡಿದ್ದೇನೆ. ಇದರ ಜತೆಗೆ ರಾಡ್‌ ತುಂಬಿದ ಲಾರಿಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
 - ಸಲೀಂ ಬರೆಪ್ಪಾಡಿ,
     ಕೂರ್ನಡ್ಕ

Advertisement

ಕಂಡಲ್ಲಿ ದಂಡ
ಹೆಚ್ಚಾಗಿ ಟಾರ್ಪಾಲು ಹೊದಿಸಿ, ಮರಳು ಮತ್ತು ಮಣ್ಣನ್ನು ಸಾಗಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಟಾರ್ಪಾಲು ಹೊದಿಸದೆ ಸಂಚರಿಸುವ ಘಟನೆಗಳೂ ಆಗುತ್ತಿವೆ. ಇಂತಹ ಲಾರಿಗಳು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು.
– ಶ್ರೀಧರ್‌
ಆರ್‌ಟಿಒ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next