ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯ ಚಾಲನಾ ಕಾರ್ಯಕ್ರಮದಿಂದ ಗುರುವಾರ ಬೆಳಗ್ಗೆಯಿಂದ ಸಂಜೆಯ ತನಕ ಬೆಂಗಳೂರು-ತುಮಕೂರು ರಸ್ತೆ ಸಂಚಾರ ದಟ್ಟಣೆಯಿಂದ ಕೂಡಿತ್ತು.
ಯಾತ್ರೆಗೆ ಬೆಳಗ್ಗೆ 10 ಗಂಟೆಯಿಂದಲೇ ಕಾರ್ಯಕರ್ತರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನಕ್ಕೆ ಬರಲು ಆರಂಭಿಸಿದ್ದು, ಮಧ್ಯಾಹ್ನ ಮೂರು ಗಂಟೆಯ ತನಕವೂ ಕಾರ್ಯಕರ್ತರು ಸೇರಿದಂತೆ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಹಾಗೂ ಕೇಂದ್ರ ಸಚಿವರು ಕಾರಿನಲ್ಲಿ ಬರುತ್ತಿದ್ದ ಕಾರಣ ಬೆಂಗಳೂರಿನಿಂದ ತುಮಕೂರಿಗೆ ಹೋಗುವ ಮತ್ತು ತುಮಕೂರಿನಿಂದ ಬೆಂಗಳೂರು ಕಡೆಗೆ ಬರುವ ವಾಹನಗಳ ಸಂಚಾರವೇ ಸ್ಥಗಿತವಾಗಿತ್ತು.
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ಸಂಚಾರ ದಟ್ಟಣೆ ಆರಂಭವಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಮಧ್ಯಾಹ್ನ 12 ಗಂಟೆ ಸುಮಾರಿಗೆ ರ್ಯಾಲಿಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾದಂತೆ ಇನ್ನಷ್ಟು ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ಬೇರೆ ಬೇರೆ ಕಡೆಗೆ ಹೋಗುತ್ತಿದ್ದ ಮತ್ತು ಇದೇ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯಿಂದ ಬಸವಳಿದಿದ್ದಾರೆ.
ಕಾರ್ಯಕ್ರಮ ನಂತರವೂ ಆಗಮನ: ಟ್ರಾಫಿಕ್ ಜಾಮ್ ವಿಪರೀತವಾಗಿದ್ದರಿಂದ ಬಹಳಷ್ಟು ಬಿಜೆಪಿ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ಕಾರ್ಯಕ್ರಮ ತಲುಪಲು ಆಗಲಿಲ್ಲ. ಕಾರ್ಯಕ್ರಮ ಮುಗಿದು ಎಲ್ಲರೂ ಹೋಗುತ್ತಿದ್ದರೆ, ಬೈಕ್‌ಗಳಲ್ಲಿ ಬಿಜೆಪಿ ಧ್ವಜ ಕಟ್ಟಿಕೊಂಡು ಕಾರ್ಯಕರ್ತರು ಮೈದಾನದ ಕಡೆ ಬರುತ್ತಲೇ ಇದ್ದರು. ಕಾರ್ಯಕ್ರಮ ಮುಗಿದ ವಿಚಾರ ತಿಳಿದು ನಿರಾಸೆಯಿಂದ ವಾಪಸಾಗುತ್ತಿದ್ದರು.
ಗಣ್ಯರ ಓಡಾಟ, ರಥಯಾತ್ರೆ ಕಾರಣದಿಂದಾಗಿ ಕಾರ್ಯಕ್ರಮ ಮುಕ್ತಾಯವಾಗುವ ವೇಳೆ ಮೈದಾನದ ಸುತ್ತ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಜಾಮ್ ಸಮಸ್ಯೆ ಸಂಜೆ 5 ಗಂಟೆವರೆಗೂ ಮುಂದುವರಿದಿತ್ತು. ಎಲ್ಲೆಂದರಲ್ಲಿ ನುಗ್ಗುತ್ತಿದ್ದ ವಾಹನಗಳನ್ನು ನಿಯಂತ್ರಿಸಿ ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಹರಸಾಹಸ ಪಟ್ಟರು.
ಟ್ರಾಫಿಕ್‌ನಲ್ಲಿ ಸಿಲುಕಿದ ಐದು ಆ್ಯಂಬುಲೆನ್ಸ್: ಬಿಜೆಪಿ ಕಾರ್ಯಕ್ರಮದ ಟ್ರಾಫಿಕ್ ಜಾಮ್‌ನಿಂದ ಆ್ಯಂಬುಲೆನ್ಸ್‌ಗೂ ದಾರಿ ಸಿಕ್ಕಿಲ್ಲ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸುಮಾರು 5 ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಸಿಲುಕಿ ಎಷ್ಟೇ ಹಾರನ್ ಹಾಕಿದ್ದರೂ, ಮುಂದೆ ಸಾಗಲು ಸಾಧ್ಯವಾಗುತ್ತಿರಲಿಲ್ಲ. ಈ ಹೊತ್ತಿಗೆ ಒಳಗಿದ್ದ ರೋಗಿ ಮತ್ತು ಕುಟುಂಬಸ್ಥರು ಭಯಭೀತರಾಗಿದ್ದರು. ಪೊಲೀಸರು ಏನೇ ಮಾಡಿದರೂ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗಲಿಲ್ಲ.