ಕುದೂರು: ರಾಮನಗರ ಜಿಲ್ಲೆಯ ಗಡಿ ಗ್ರಾಮವಾದ ಹೊಸಹಳ್ಳಿ ಗ್ರಾಮದಿಂದ ಶಿವಗಂಗೆ ಮತ್ತು ಕುದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದೆ. ಪ್ರತಿ ನಿತ್ಯ ಸಂಚಾರ ಮಾಡುವ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.
ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮವು ಬೆಂಗಳೂರು ಗ್ರಾಮಾಂತರ ಹಗೂ ರಾಮನಗರ ಜಿಲ್ಲೆಯ ಗಡಿ ಅಂಚಿನಲ್ಲಿರುವುದರಿಂದ ಅಭಿವೃದ್ಧಿ ಮರಿಚಿಕೆಯಾಗಿದೆ. ಸುಮಾರು 70 ಮನೆಗಳಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ ಸಮಪರ್ಕವಿಲ್ಲ. ಸುಮಾರು ಮೂರುವರೆ ಕಿ.ಮೀ ರಸ್ತೆಯುದ್ದಕ್ಕೂ ದಪ್ಪ ಜಲ್ಲಿಕಲ್ಲು ಹಾಗೂ ಗುಂಡಿಗಳದ್ದೇ ಕಾರುಬಾರು. ಇದರಿಂದಾಗಿ ವಯೋವೃದ್ದರು, ರೈತರು, ವಿದ್ಯಾರ್ಥಿಗಳು ನಿತ್ಯ ಸಂಚಾರಿಸಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬರುತ್ತಿದೆ.
ಹಳೇ ರಸ್ತೆ ಅವಲಂಬನೆ: ಶಿವಗಂಗೆ ರಸ್ತೆ ಮಾರ್ಗದಿಂದ ಹೊಸಹಳ್ಳಿ ಮಾರ್ಗವಾಗಿ ಚಿಕ್ಕಮಸ್ಕಲ್, ನಾಗನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಅನೇಕ ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಗಿದ್ದು, ಸುಮಾರು ಇಪ್ಪತ್ತು ವರ್ಷಗಳು ಕಳೆದರೂ ಅದೇ ರಸ್ತೆಯನ್ನೂ ಅಲಂಬಿಸುವಂತಾಗಿದೆ. ಇದೀಗ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಶಂಕುಸ್ಥಾಪನೆ ನೇರವೆರಿಸಿದ್ದಾರೆ. ಶಂಕುಸ್ಥಾಪನೆ ನೇರವೇರಿಸಿ ಸುಮಾರು 3 ತಿಂಗಲು ಕಳೆದರೂ ಕೆಲಸ ಇನ್ನೂ ಆರಂಭಗೊಂಡಿಲ್ಲ. ರಸ್ತೆಯ ಕಿತ್ತು ಹೋಗಿದ್ದು, ಮಾರು ಉದ್ದದ ಗುಂಡಿಗಳಾಗಿವೆ. ಇದಲ್ಲದೆ ರಸ್ತೆಯಲ್ಲಿನ ಜಲ್ಲಿಕಲ್ಲುಗಳು ಎದ್ದು ಕಾಣುತ್ತಿದ್ದು, ಪ್ರತಿ ನಿತ್ಯ ಎರಡರಿಂದ ಮುರು ವಾಹನಗಳು ಪಂಚರ್ ಆಗಿ ದಿನ ಐದಾರು ಕಿ.ಮೀ ತಳ್ಳುವಂತಾಗಿದೆ. ಅದಷ್ಟು ಬೇಗ ರಸ್ತೆ ಡಾಂಬರೀಕರಣಗೊಳಿಸ ಬೇಕು ಎಂದು ಮನವಿ ಮಾಡಿದ್ದಾರೆ.
ರೈತರಿಗೂ ತಪ್ಪದ ಗೋಳು: ರೈತರು ಶ್ರಮವಹಿಸಿ ಬೆಳೆದ ಬೆಳೆಗಳನ್ನು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸಲಾಗದೆ ಹಿಡಿ ಶಾಪವಾಕುತ್ತಿದ್ದಾರೆ. ಒಂದು ವೇಳೆ ಬೆಳೆ ಸಾಗಿಸಲು ಮುಂದಾದರೂ ಸಾಮಾನ್ಯಕ್ಕಿಂತ ಮೂರು ಪಟ್ಟು ಹಣ ನೀಡಬೇಕು.
ಮಳೆ ಬಂದರಂತೂ ಇನ್ನೂ ತೊಂದರೆ: ಮಳೆ ಬಂದರಂತೂ ಮಂಡಿಯುದ್ದದ ಗುಂಡಿಗಳು ಇರುವುದರಿಂದ ನೀರು ನಿಲ್ಲುತ್ತದೆ. ನೀರು ನಿಲ್ಲುವುದರಿಂದ ರಸ್ತೆಯಾವುದು? ಗುಂಡಿ ಯಾವುದು ಗೊತ್ತಾಗದೇ ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.
ರಸ್ತೆಗಳು ಅಭಿವೃದ್ಧಿಯ ಸಂಕೇತ: ಗ್ರಾಮಗಳು ಅಭಿವೃದ್ಧಿಯಾಗಬೇಕು ಎಂದರೆ ಮೊದಲು ಸಮರ್ಪಕ ರಸ್ತೆ ಇರಬೇಕು. ಆಗ ಮಾತ್ರ ಹಳ್ಳಿಗಳ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಗ್ರಾಮೀಣಾಭಿವೃದ್ಧಿ ಕೇವಲ ಕನಸಿನ ಮಾತಾಗುತ್ತದೆ. ಪ್ರತಿ ನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆಯ ನಿರ್ವಹಣೆಯಲ್ಲೇ ನಿರ್ಲಕ್ಷ್ಯವಹಿಸಿದ್ದರೆ ಇನ್ನೇನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.
● ಕೆ.ಎಸ್.ಮಂಜುನಾಥ್