Advertisement

ಮಹಾನಗರ : ಮಿನಿ ವಿಧಾನಸೌಧದ ಮುಂದೆ ಟ್ರಾಫಿಕ್‌ ಜಾಮ್‌ ಕಿರಿಕಿರಿ

10:46 PM Mar 06, 2021 | Team Udayavani |

ಮಹಾನಗರ: ನಗರದ ಹಂಪನಕಟ್ಟೆ ಪ್ರದೇಶದ ಮಿನಿ ವಿಧಾನಸೌಧದ ಎದುರು ರಸ್ತೆ ಬದಿ ಸಾರ್ವಜನಿಕರು ವಾಹನ ನಿಲುಗಡೆ ಮಾಡುತ್ತಿರುವುದು ಹಾಗೂ ಅಲ್ಲಿಯೇ ಪ್ರತಿಭಟನೆಗಳಿಗೂ ಅವಕಾಶ ಕಲ್ಪಿಸಿರುವ ಕಾರಣ ಇಲ್ಲಿ ಆಗಿಂದಾಗ್ಗೆ ಟ್ರಾಫಿಕ್‌ ಜಾಮ್‌ ಆಗುತ್ತಿದ್ದು, ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಮಿನಿ ವಿಧಾನಸೌಧದ ಎದುರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿ ಅರ್ಧ ದಲ್ಲಿದ್ದು, ಇಲ್ಲಿ ಸಂಚಾರಕ್ಕೆ ಅಡಚಣೆ ಈಗಾಗಲೇ ಇದೆ. ಸ್ಮಾರ್ಟ್‌ ಸಿಟಿ ಕಾಮ ಗಾರಿಗೆ ನ್ಯಾಯಾಲಯದಿಂದಲೂ ತಡೆಯಾಜ್ಞೆ ಇರುವುದರಿಂದ ಕಾಮಗಾರಿ ಅರ್ಧದಲ್ಲಿದೆ. ಇದೇ ವೇಳೆ ಮಿನಿ ವಿಧಾನಸೌಧದ ಆವರಣದಲ್ಲಿ ಇಂಟರ್‌ಲಾಕ್‌ ಕಾಮಗಾರಿಯೂ ಅಪೂರ್ಣವಾ ಗಿದೆ. ಹಾಗಾಗಿ ತಾತ್ಕಾಲಿಕವಾಗಿ, ಅಂದರೆ ಸ್ಮಾರ್ಟ್‌ ಸಿಟಿ ಕಾಮಗಾರಿ ಪುನರಾರಂಭಗೊಂಡು ಮುಕ್ತಾಯ ಆಗುವ ತನಕ ಮಿನಿ ವಿಧಾನಸೌಧದ ಆವರಣಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರ ಪರಿಣಾಮವಾಗಿ ವಿವಿಧ ಕೆಲಸಗಳಿಗಾಗಿ ಮಿನಿ ವಿಧಾನಸೌಧದಲ್ಲಿರುವ ಕಚೇರಿಗಳಿಗೆ ತೆರಳುವವರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗಬೇಕಾಗಿದೆ.

ಪರ್ಯಾಯ ವ್ಯವಸ್ಥೆ ಇಲ್ಲ
ಅಂಡರ್‌ ಪಾಸ್‌ ನಿರ್ಮಾಣ ಆಗುತ್ತಿರುವ ತಾಣವು ಹಂಪನಕಟ್ಟೆ ಭಾಗದಿಂದ ಬರುವ ವಾಹನಗಳು, ರೈಲು ನಿಲ್ದಾಣ ರಸ್ತೆಯ ಮೂಲಕ ಬರುವ ವಾಹನಗಳು ಸೇರುವ ಜಂಕ್ಷನ್‌ ಆಗಿದ್ದು, ಸಹಜವಾಗಿಯೇ ಇಲ್ಲಿ ವಾಹನಗಳ ದಟ್ಟಣೆ ಇರುತ್ತದೆ. ಇದೀಗ ಅಲ್ಲಿ ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರೂ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇಲ್ಲಿನ ರಸ್ತೆ ಬದಿ ನಿಲ್ಲಿಸುವುದರಿಂದ ಪಾರ್ಕಿಂಗ್‌ ನಿಯಮ ಉಲ್ಲಂಘನೆ ಆಗುತ್ತಿದ್ದರೂ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ವಾಹನ ನಿಲ್ಲಿಸುವುದು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ. ಇದರ ಜತೆಗೆ ಪ್ರತಿಭಟನೆಗೂ ಇದೇ ಸ್ಥಳವನ್ನು ಒದಗಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಇಲ್ಲಿನ ಪರಿಸ್ಥಿತಿ ಗೋಜಲು ಗೋಜಲಾಗಿದ್ದು, ಟ್ರಾಫಿಕ್‌ ಜಾಮ್‌ ಆಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. 2 ದಿನಗಳ ಹಿಂದೆ ಪ್ರತಿಭಟನೆ ನಡೆದಾಗ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಪೊಲೀಸರು ರಸ್ತೆ ಬದಿ ವಾಹನ ನಿಲ್ಲಿಸಿದ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮಿನಿ ವಿಧಾನಸೌಧದ ಆವರಣಕ್ಕೆ ಸಾರ್ವಜನಿಕರ ವಾಹನ ಪ್ರವೇಶ ನಿರ್ಬಂಧಿಸಿದ ಕಾರಣ ಅಲ್ಲಿಗೆ ಬರುವ ಸಾರ್ವಜನಿಕರಿಗೆ ತಮ್ಮ ವಾಹನಗಳ ನಿಲುಗಡೆಗೆ ಎದುರಿನ ಪುರಭವನದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಪುರಭವನಕ್ಕೆ ತೆರಳಲು ವಾಹನ ಸವಾರರು ಎ.ಬಿ. ಶೆಟ್ಟಿ ವೃತ್ತದ ತನಕ ಹೋಗಿ ವಾಪಸ್‌ ಬರಬೇಕಾಗಿದೆ. ಹಾಗಾಗಿ ಪುರಭವನ ಆವರಣಕ್ಕೆ ಹೋಗಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.

ಮಾತ್ರವಲ್ಲದೆ ಮಿನಿ ವಿಧಾನ ಸೌಧಕ್ಕೆ ಬರುವವರು ತಮ್ಮ ವಾಹನಗಳನ್ನು ಪುರಭವನದ ಆವರಣದಲ್ಲಿ ನಿಲುಗಡೆಗೆ ಮಾಡಬಹುದು ಎಂಬುದಾಗಿ ನಾಮ ಫಲಕವನ್ನು ಪುರಭವನದ ಗೇಟ್‌ನಲ್ಲಾಗಲಿ, ಮಿನಿ ವಿಧಾನಸೌಧದ ಆವರಣದಲ್ಲಾಗಲಿ ಎಲ್ಲೂ ಹಾಕಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ. ಇದರಿಂದಾಗಿ ಅವರು ರಸ್ತೆ ಬದಿ ನಿಲ್ಲಿಸುತ್ತಿದ್ದಾರೆ.

Advertisement

ಪ್ರತಿಭಟನೆಗೆ ಪರ್ಯಾಯ ಜಾಗ ಬೇಕು
ನಗರದಲ್ಲಿ ಪ್ರತಿಭಟನೆಗಳನ್ನು ನಡೆಸುವವರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂಬುದು ಹಳೆಯ ಬೇಡಿಕೆ. ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯ ದ್ವಾರದ ಎದುರು ಪ್ರತಿಭಟನೆ ನಡೆಯುತ್ತಿದ್ದರೆ ಈಗ ಮಿನಿ ವಿಧಾನ ಸೌಧದ ಎದುರು ರಸ್ತೆಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದರಿಂದ ಸಾರ್ವಜನಿಕರಿಗೆ ಅನನುಕೂಲ ಆಗುವುದು ಸಹಜ. ಪ್ರತಿಭಟನೆಗಳಿಗೆ ಪ್ರತ್ಯೇಕ ಜಾಗ ನಿಗದಿ ಪಡಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಇರಬೇಕಿತ್ತು. ಮಿನಿ ವಿಧಾನಸೌಧದ ಎದುರು, ಪುರಭವನದ ಆವರಣದಲ್ಲಿ ಇರುವ ಗಾಂಧಿ ಪಾರ್ಕ್‌ನಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳಿಗೆ ವ್ಯವಸ್ಥೆ ಕಲ್ಪಿಸಬಹುದು ಎಂಬ ಅಭಿಪ್ರಾಯವನ್ನು ಪೊಲೀಸರು ವ್ಯಕ್ತ ಪಡಿಸುತ್ತಾರೆ.

ಗಾಂಧಿ ಪಾರ್ಕ್‌ನಲ್ಲಿ ಪ್ರತಿಭಟನೆಗಳಿಗೆ ಅವಕಾಶ
ಪುರಭವನದ ಆವರಣದಲ್ಲಿರುವ ಗಾಂಧಿ ಪಾರ್ಕ್‌ನಲ್ಲಿ ವಿವಿಧ ರೀತಿಯ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸಬಹುದು. ಅಲ್ಲಿ ಗಾಂಧಿ ಪ್ರತಿಮೆಯೂ ಇದೆ. ಸುಮಾರು 400- 500 ಜನರು ಸೇರುವಷ್ಟು ಸ್ಥಳಾವಕಾಶ ಇಲ್ಲಿದೆ. ಈ ಬಗ್ಗೆ ಟ್ರಾಫಿಕ್‌ ಪೊಲೀಸ್‌ ವತಿಯಿಂದ ಜಿಲ್ಲಾಡಳಿತಕ್ಕೆ ಕೋರಿಕೆ/ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.
– ನಟರಾಜ್‌ ಎಂ.ಎ.,ಎಸಿಪಿ, ಟ್ರಾಫಿಕ್‌

ಪುರಭವನದ ಆವರಣದಲ್ಲಿ ಪಾರ್ಕಿಂಗ್‌ಗೆ ಅವಕಾಶ
ಮಿನಿ ವಿಧಾನಸೌಧಕ್ಕೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಕಚೇರಿಗೆ ಬರುವ ಸಾರ್ವಜನಿಕರಿಗೆ ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಪುರಭವನದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ.
-ಮದನ್‌ ಮೋಹನ್‌ ಸಿ., ಸಹಾಯಕ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next