ಕುಷ್ಟಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಅಡಿಯ ಸರ್ವಿಸ್ ರಸ್ತೆ ಪಕ್ಕದ ಒಳ ಚರಂಡಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಅಡಿಯ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಪಕ್ಕದ ಒಳ ಚರಂಡಿ ಕಾಮಗಾರಿಯನ್ನು ಜಿಎಂಆರ್ ಕಂಪನಿ ನಿರ್ವಹಿಸುತ್ತಿದೆ.
ಕಳೆದ ಮೂರ್‍ನಾಲ್ಕು ತಿಂಗಳಿನಲ್ಲಿ ಪಶ್ಚಿಮ ದಿಕ್ಕಿನ ಒಂದು ಬದಿಯ ಒಳ ಚರಂಡಿ ಕಾಮಗಾರಿ ಮುಗಿದಿದೆ. ಸದ್ಯ ಪೂರ್ವ ದಿಕ್ಕಿನಲ್ಲಿ ಇದೇ ಕಾಮಗಾರಿ ಮುಂದುವರಿದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ನಿರ್ದೇಶನದ ಮೇರೆಗೆ ಈ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ ವಾಹನ ದಟ್ಟಣೆಯ ಈ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆವಹಿಸದೇ ಕಾಮಗಾರಿ ನಡೆದಿದೆ. ಸರ್ವಿಸ್ ರಸ್ತೆಯ ಪಶ್ಚಿಮ ಭಾಗದ ಒಳ ಚರಂಡಿ ಕಾಮಗಾರಿ ಮುಗಿದಿದ್ದು, ಇನ್ನೂ ಸಂಪರ್ಕ ಕಲ್ಪಿಸಿಲ್ಲ.
ಸದರಿ ಒಳಚರಂಡಿಗೆ ಅಗೆದ ಮಣ್ಣಿನ ದಿಬ್ಬ ಹಾಗೆಯೇ ಇದ್ದು, ಮಣ್ಣಿನ ಗುಡ್ಡೆಯ ಮೇಲೆ ವಾಹನಗಳು, ಜನ ಸಂಚರಿಸುತ್ತಿದ್ದಾರೆ. ರಸ್ತೆಯ ಮೇಲಿನ ಮಣ್ಣಿನ ದಿಬ್ಬ ಎತ್ತರವಾಗಿದ್ದು, ಬೈಕ್ ಸವಾರಿಯಲ್ಲಿರುವ ಹಿಂಬದಿಯ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ರೈತ ಸಂಘದಿಂದ ಪೋಸ್ಟರ್ ಪ್ರದರ್ಶನ
ಸರ್ವಿಸ್ ರಸ್ತೆ ಕ್ರಾಸ್ ಮಾಡುವ ಸಂದರ್ಭದಲ್ಲಿ ಮಣ್ಣಿನ ದಿಬ್ಬ ಪರಿಸ್ಥಿತಿ ಗಮನಿಸಿದ್ದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು, ಒಳ ಚರಂಡಿ ಕಾಮಗಾರಿ ವೇಳೆ ಅಗತ್ಯ ಮೂಲ ಸೌಕರ್ಯ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಜಿಎಂ ಆರ್ ಕಂಪನಿಯ ಎಂಜನಿಯರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೂಡಲೇ ರಸ್ತೆಯ ಮೇಲಿನ ಮಣ್ಣಿನ ದಿಬ್ಬವನ್ನು ತೆರವುಗೊಳಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಗಮನಕ್ಕೆ ತಂದು ಕಾಮಗಾರಿ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದರು.