Advertisement

ಮಳೆಗಾಲದಲ್ಲಿ ಸಂಚಾರ ದುಸ್ತರ

08:51 PM Aug 09, 2021 | Team Udayavani |

ವಡ್ಡರ್ಸೆ ಹಾಗೂ ಕಾವಡಿ ಎರಡು ಗ್ರಾಮಗಳನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆಯದ್ದು ಪ್ರತಿ ವರ್ಷದ ಮಳೆಗಾಲದಲ್ಲೂ ಇದೇ ಅವಸ್ಥೆ. ಇನ್ನು ಸಂಚರಿಸಲು ಸಾಧ್ಯವೇ ಇಲ್ಲ ಎಂದಾದಾಗ ಮಣ್ಣು ಹಾಕಿ ತಾತ್ಕಾಲಿಕವಾಗಿಯಷ್ಟೇ ಸಮಸ್ಯೆ ಪರಿಹರಿಸಲಾಗುತ್ತದೆ.

Advertisement

ಕೋಟ: ಎರಡು ಗ್ರಾಮಗಳನ್ನು ಸಂಪರ್ಕಿಸುವ  ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ವಡ್ಡರ್ಸೆ -ಕಾವಡಿ ಗ್ರಾಮೀಣ ರಸ್ತೆಯನ್ನು 2015-16ನೇ ಸಾಲಿನಲ್ಲಿ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ  ಕಾಂಕ್ರೀಟ್‌ಕಾಮಗಾರಿಯೊಂದಿಗೆ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಕಾಮಗಾರಿಯ ಸಂದರ್ಭ  ಇಲ್ಲಿನ ಕಾಶೀಶ್ವರ ದೇವಸ್ಥಾನದ ಬಳಿ ಖಾಸಗಿ ವ್ಯಕ್ತಿಗಳು ತಮ್ಮ  ಜಾಗ ಬಿಟ್ಟುಕೊಡಲು ಅಡ್ಡಿಪಡಿಸಿ ಕಾಮಗಾರಿಗೆ ತಡೆಯೊಡ್ಡಿದ್ದರಿಂದ 100 ಮೀಟರ್‌ ಕಾಮಗಾರಿ ಬಾಕಿ ಉಳಿಸಲಾಗಿತ್ತು. ಇದೀಗ  ಪ್ರತೀ ಮಳೆಗಾಲದಲ್ಲಿ ಕಾಮಗಾರಿ ಬಾಕಿ ಉಳಿದ ಜಾಗದಲ್ಲಿ ಹೊಂಡಗಳು ಸೃಷ್ಟಿಯಾಗಿ ಕೆಸರುಮಯವಾಗುತ್ತದೆ ಹಾಗೂ ಇದರಿಂದ ಸುಮಾರು ನಾಲ್ಕು ತಿಂಗಳು ವಾಹನ ಸಂಚಾರ ದುಸ್ತರವಾಗುತ್ತದೆ.

ಈ ರಸ್ತೆ  2 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು ಇದರ ಮೂಲಕ ವಡ್ಡರ್ಸೆ,  ಮಧುವನ, ಬನ್ನಾಡಿ ಮುಂತಾದ ಕಡೆಯವರು ಆರೇಳು ಕಿ.ಮೀ ಹತ್ತಿರದಲ್ಲಿ  ಕಾವಡಿ, ಕಾರ್ಕಡ,  ಯಡ್ತಾಡಿ ಸಂಪರ್ಕಿಸ ಬಹುದು, ಬ್ರಹ್ಮಾವರ-ಜನ್ನಾಡಿ ರಾಜ್ಯ ಹೆದ್ದಾರಿಗೂ, ಕೋಟ- ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯನ್ನೂ ರಸ್ತೆ  ಸಂಪರ್ಕಿಸುತ್ತದೆ.

ಹಲವು ಬಾರಿ ಪ್ರಯತ್ನ:

ಸಮಸ್ಯೆ ಪರಿಹರಿಸುವ ಕುರಿತು ಜನಪ್ರತಿನಿಧಿಗಳು ಸಾಕಷ್ಟು ಬಾರಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಖಾಸಗಿ ಸ್ಥಳದವರು  ರಸ್ತೆ ಅಭಿವೃದ್ಧಿಗೆ ಸ್ಥಳ ಬಿಟ್ಟುಕೊಡಲು ನಿರಾಕರಿಸುತ್ತಿರುವುದರಿಂದ ಸಮಸ್ಯೆ ಮುಂದುವರಿದಿದೆ.

Advertisement

ಶಾಶ್ವತ ಪರಿಹಾರ ಅಗತ್ಯ :

ರಸ್ತೆ ಕೆಸರುಮಯವಾಗಿ ಸಂಚರಿಸಲು ಅಸಾಧ್ಯವಾಗಾಗ ಸ್ಥಳೀಯ ಜನಪ್ರತಿನಿಧಿಗಳು ಅಥವಾ ಗ್ರಾ.ಪಂ. ಮೂಲಕ ಮಣ್ಣು ಹಾಕಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಆದರೆ ಸ್ವಲ್ಪ ದಿನದಲ್ಲೇ ಸಮಸ್ಯೆ ಮುಂದುವರಿಯುತ್ತದೆ. ಹೀಗಾಗಿ ಮಳೆಗಾಲದ 4 ತಿಂಗಳು ಈ ರಸ್ತೆಯಲ್ಲಿ ಸಂಚರಿಸುವುದನ್ನೇ ಕೆಲವು ಮಂದಿ  ಬಿಟ್ಟಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಹಿರಿಯ ಅಧಿಕಾರಿಗಳು ಸ್ಥಳಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕುಎನ್ನುವುದು ಸ್ಥಳೀಯರ ಮನವಿಯಾಗಿದೆ.

ಇತರ ಸಮಸ್ಯೆಗಳೇನು? :

  • ಈ ರಸ್ತೆ ಹೊರತುಪಡಿಸಿ ಕಾವಡಿ ನಿವಾಸಿಗಳಿಗೆ ವಡ್ಡರ್ಸೆಯಲ್ಲಿರುವ ಗ್ರಾ.ಪಂ. ಕಚೇರಿ, ಗ್ರಾಮಲೆಕ್ಕಾಧಿಕಾರಿಗಳ ಕಚೆೇರಿಗೆ ಬರಲು ಆರೇಳು ಕಿ.ಮೀ. ಸುತ್ತು ಬಳಸಬೇಕು.
  • ರಸ್ತೆ ಸಮಸ್ಯೆಯಿಂದ ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ-ನಿತ್ಯ ಕೆಲಸಕ್ಕೆ ತೆರಳುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
  • ವಡ್ಡರ್ಸೆ-ಕಾವಡಿ ಹೂಳೆಯಲ್ಲಿ ಹೂಳು, ಪೊದೆಗಳು ತುಂಬಿರುವುದರಿಂದ ಪ್ರತೀ ವರ್ಷ ನೆರೆ ಸಂಭವಿಸಿ ಕೃಷಿ ಭೂಮಿ ನಾಶವಾಗುತ್ತದೆ.
  • ಈ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಅಗತ್ಯವಿದೆ.
  • ಈ ಹಿಂದೆ ಕಾರ್ಕಡದಿಂದ ಕಾವಡಿ, ಸಾಲಿಗ್ರಾಮಕ್ಕೆ ಬಸ್‌ ಸಂಚಾರವಿದ್ದು ಇದೀಗ ಸ್ಥಗಿತಗೊಂಡಿದೆ. ಬಸ್‌ಸಂಚಾರ ಪುನರಾರಂಭಗೊಂಡರೆ ಅನುಕೂಲವಾಗಲಿದೆ.

ಸಮಸ್ಯೆ ಪರಿಹರಿಸಿ:

ನಾವು ಪ್ರತಿನಿತ್ಯ ಇದೇ ದಾರಿಯಲ್ಲಿ ಸಂಚರಿಸುವವರು. ಮಳೆಗಾಲದ ನಾಲ್ಕು ತಿಂಗಳು ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತದೆ. ಪ್ರತಿದಿನ ನೂರಾರು ಮಂದಿ ಈ ರೀತಿ ಸಮಸ್ಯೆ ಎದುರಿಸುತ್ತಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು.-ಭುಜಂಗ ಶೆಟ್ಟಿ,  ರಾಜೀವ ಶೆಟ್ಟಿ,  ಸ್ಥಳೀಯರು

ದೂರುಗಳು ಬಂದಿಲ್ಲ :

ಈ ರಸ್ತೆಯ ಬಗ್ಗೆ  ಹಿಂದೆ ಸಾಕಷ್ಟು ದೂರುಗಳು ಕೇಳಿಬಂದಿತ್ತು. ಆದರೆ ನಮ್ಮ ಆಡಳಿತಾವಧಿಯಲ್ಲಿ  ದೂರು ಗಳು ಬಂದಿಲ್ಲ. ಸ್ಥಳೀಯರು ಈ ಬಗ್ಗೆ ಮನವಿ ಸಲ್ಲಿಸಿದಲ್ಲಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.-ಸವಿತಾ ಪ್ರಕಾಶ್‌ ಆಚಾರ್ಯ, ಅಧ್ಯಕ್ಷರು, ವಡ್ಡರ್ಸೆ ಗ್ರಾ.ಪಂ.

 

-ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next