Advertisement

ಹ್ಯಾಮಿಲನ್‌ ಸರ್ಕಲ್‌ ಪ್ರದೇಶದಲ್ಲಿ ಟ್ರಾಫಿಕ್‌

01:01 PM May 31, 2022 | Team Udayavani |

ಸ್ಟೇಟ್‌ಬ್ಯಾಂಕ್: ನಗರದ ಸ್ಟೇಟ್‌ ಬ್ಯಾಂಕ್‌ನ ಹ್ಯಾಮಿಲ್ಟನ್‌ ಸರ್ಕಲ್‌ ಅನ್ನು ಈಗಾಗಲೇ ಅಭಿವೃದ್ಧಿಯ ಉದ್ದೇಶದಿಂದ ತೆಗೆಯಲಾಗಿದ್ದು, ಅಲ್ಲಿ ಇದೀಗ ಟ್ರಾಫಿಕ್‌ ಐಲ್ಯಾಂಡ್‌ ನಿರ್ಮಾಣಕ್ಕೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

Advertisement

ಆದರೆ ಸಂಚಾರ ದಟ್ಟಣೆ ಇರುವ ಸ್ಟೇಟ್‌ಬ್ಯಾಂಕ್‌ನಲ್ಲಿ ಟ್ರಾಫಿಕ್‌ ಐಲ್ಯಾಂಡ್‌ ಮಾಡುವ ಮೂಲಕ ಮತ್ತಷ್ಟು ಸಂಚಾರ ದಟ್ಟಣೆಗೆ ಅವಕಾಶ ನೀಡಿದಂತಾಗುತ್ತದೆ; ಹೀಗಾಗಿ ವಿಸ್ತಾರದ ಟ್ರಾಫಿಕ್‌ ಐಲ್ಯಾಂಡ್‌ ಇಲ್ಲಿ ಸೂಕ್ತವಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಹ್ಯಾಮಿಲ್ಟನ್‌ ಸರ್ಕಲ್‌ ಇದ್ದ ಜಾಗದಲ್ಲಿ ಕಲ್ಲುಗಳನ್ನು ಇಟ್ಟು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಸಂಚಾರ ಗೊಂದಲ ಉಂಟಾಗಿದೆ. ಈ ಮಧ್ಯೆ, ಜಿಲ್ಲಾಧಿಕಾರಿ ಕಚೇರಿ ಭಾಗದಿಂದ ಬರುವ ವಾಹನಗಳು ಹಂಪನಕಟ್ಟೆ ಕಡೆಗೆ ತೆರಳಲು ಯೂಟರ್ನ್ ತೆಗೆಯುವ ಹೊಸ ನಿಯಮ ಜಾರಿಗೆ ತರಲಾಗಿದೆ.

ಸ್ಥಳೀಯರ ಆಕ್ಷೇಪ

ನಗರದ ಕೆಲವು ರಸ್ತೆಗಳು ಅಗಲ ಕಡಿಮೆ ಇರುವ ಕಾರಣ ಕೆಲವೊಂದು ಕಡೆ ಕೆಲವರ ಮನವೊಲಿಸಿ ರಸ್ತೆಗೆ ಜಾಗ ಬಿಟ್ಟು ಕೊಡಲು ಹೇಳಿ ರಸ್ತೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಬಹುಭಾಗದಲ್ಲಿ ಕ್ರಮವಾಗುತ್ತಿದೆ.

ಆದರೆ ಸ್ಟೇಟ್‌ಬ್ಯಾಂಕ್‌ ಬಳಿ ಇರುವ ರಸ್ತೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಬಳಸಿಕೊಂಡು ದೊಡ್ಡ ದೊಡ್ಡ ಲಾರಿಗಳು ತಿರುಗದ ರೀತಿಯಲ್ಲಿ ಕಲ್ಲುಗಳನ್ನೂ ಇಟ್ಟು ರಸ್ತೆಯನ್ನು ಹಾಳು ಮಾಡಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ಷೇಪ.

Advertisement

ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಕೆಲಸ ಮಾಡುವ ಸಂದರ್ಭ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾಗಿತ್ತು. ಸಂಚಾರಕ್ಕೆ ಸಮಸ್ಯೆ ಆಗಲಿದೆ ಎಂಬ ಬಗ್ಗೆ ಸ್ಥಳೀಯರು ಬೊಟ್ಟು ಮಾಡಿದಾಗ ನಗರ ಸುಂದರವಾಗಬೇಕು ಎಂಬ ಕಾರಣದಿಂದ ಹೀಗೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು-ಎಂಜಿನಿಯರ್‌ಗಳು ತಿಳಿಸಿದ್ದರು. ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ ನಗರ ಸುಂದರ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸ್ಥಳೀಯರು ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಏನಿದು ಟ್ರಾಫಿಕ್‌ ಐಲ್ಯಾಂಡ್‌?

ಅಧಿಕಾರಿಗಳ ಪ್ರಕಾರ ನಗರದಲ್ಲಿ ವೃತ್ತಗಳ ಬದಲು ಟ್ರಾಫಿಕ್‌ ಐಲ್ಯಾಂಡ್‌ ನಿರ್ಮಾಣಕ್ಕೆ ಒಲವು ತೋರಲಾಗುತ್ತಿದೆ. ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ದ್ವೀಪಗಳ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಲೇನ್‌ಗಳಲ್ಲಿ ವಾಹನಗಳು ವ್ಯವಸ್ಥಿತವಾಗಿ ಸಂಚರಿಸಲು ಸಹಾಯವಾಗುತ್ತದೆ. ಇದಕ್ಕೆ ವೃತ್ತದಷ್ಟು ಸ್ಥಳಾವಕಾಶ ಇರದ ಕಾರಣ ಸರಾಗವಾಗಿ ವಾಹನಗಳು ತಿರುವು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ನಗರಕ್ಕೆ ಹೊಸ ಸ್ವರೂಪದ ಟ್ರಾಫಿಕ್‌ ಐಲ್ಯಾಂಡ್‌ನ‌ಲ್ಲಿ ಹಚ್ಚ ಹಸುರು ಕಂಗೊಳಿಸುವಂತೆ ಲಾನ್‌, ಬೀದಿ ದೀಪ ಸಹಿತ ಸ್ಮಾರ್ಟ್‌ಪೋಲ್‌ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next