Advertisement

ಅರಣ್ಯ ವಾಸಿಗಳಿಗೆ ಸಂಚಾರಿ ಆರೋಗ್ಯ ಘಟಕ

06:00 AM Jul 28, 2018 | |

ಬೆಂಗಳೂರು: ರಾಜ್ಯದಲ್ಲಿ ಅರಣ್ಯವನ್ನೇ ಅವಲಂಬಿಸಿರುವ ಮೂಲ ನಿವಾಸಿ ಬುಡಕಟ್ಟು ಜನರಿಗೆ ಮನೆ ಬಾಗಿಲಲ್ಲೇ ವೈದ್ಯಕೀಯ ಚಿಕಿತ್ಸೆ ಒದಗಿಸುವ ಸಂಚಾರಿ ಆರೋಗ್ಯ ಘಟಕ ಸೇವೆ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ.
ಅರಣ್ಯ ಅವಲಂಬಿತ ಬುಡಕಟ್ಟು ಜನರು ಹೆಚ್ಚಾಗಿ ನೆಲೆಸಿರುವ ಪ್ರಮುಖ ಎಂಟು ಜಿಲ್ಲೆಗಳಿಗೆ ತಲಾ ಎರಡರಂತೆ 16 ಸಂಚಾರಿ ಆರೋಗ್ಯ ಘಟಕ ಸೇವೆ ಒದಗಿಸಲು ಇಲಾಖೆ ಸಜ್ಜಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಜತೆಗೆ ಔಷಧೋಪಚಾರವನ್ನು ಘಟಕ ಒದಗಿಸಲಿದೆ. ಜತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿವೆ. ಒಟ್ಟಾರೆ ಎಂಟು ಕೋಟಿ ರೂ. ವೆಚ್ಚದ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ.

Advertisement

ರಾಜ್ಯದ ಹಲವು ಅರಣ್ಯ ಪ್ರದೇಶಗಳಲ್ಲಿ ಇಂದಿಗೂ ಸಾಕಷ್ಟು ಬುಡಕಟ್ಟು ಜನಾಂಗದವರು ಅರಣ್ಯವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಏನೆಲ್ಲಾ ಯೋಜನೆ ರೂಪಿಸಿದರೂ, ಪರ್ಯಾಯ ವ್ಯವಸ್ಥೆ ಕಲ್ಪಿಸಿದರೂ ಅರಣ್ಯ ಅವಲಂಬಿತವಾಗಿಯೇ ಜೀವನ ನಡೆಸುತ್ತಿದ್ದಾರೆ. ಆಧುನಿಕ ಸಲಕರಣೆ, ಸೌಲಭ್ಯಗಳಿಂದ ದೂರವಿರುವ ಈ ಜನ ಅನಾರೋಗ್ಯ ಇಲ್ಲವೇ ನಾನಾ ಕಾಯಿಲೆಗೆ ತುತ್ತಾದರೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲಾಗದೆ ತೊಂದರೆ ಅನುಭವಿಸುತ್ತಿರುವುದು ಆಗಾಗ್ಗೆ ವರದಿಯಾಗುತ್ತಿದೆ.

ಸಂಚಾರಿ ಆರೋಗ್ಯ ಘಟಕ
ಆ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗದವರಿಗೆ ಅವರು ನೆಲೆಸಿರುವ ಪ್ರದೇಶದಲ್ಲೇ ನಿಯಮಿತವಾಗಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಸೇವೆ ಆರಂಭಿಸಲು ಇಲಾಖೆ ನಿರ್ಧರಿಸಿದೆ. ಜೇನು ಕುರುಬ, ಕೊರಗರು ಸೇರಿದಂತೆ ಇತರೆ ಅರಣ್ಯ ಅವಲಂಬಿತ ಬುಡಕಟ್ಟು ಜನ ಎಂಟು ಜಿಲ್ಲೆಗಳಲ್ಲಿ ನೆಲೆಸಿದ್ದು, ಆ ಜಿಲ್ಲೆಗಳಿಗೆ ತಲಾ ಎರಡು ಸಂಚಾರಿ ಆರೋಗ್ಯ ಘಟಕ ಒದಗಿಸಲು ಸಿದ್ಧತೆ ನಡೆಸಿದೆ.

ಎರಡು ಹಂತದಲ್ಲಿ ಅನುಷ್ಠಾನ
ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲ್ಲೂಕು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹೆಗ್ಗಡದೇವನಕೋಟೆ, ಹುಣಸೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸೇವೆ ಆರಂಭವಾಗಲಿದೆ. ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು ತಾಲ್ಲೂಕು, ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಸೇವೆ ಶುರುವಾಗಲಿದೆ.

ಕಾರ್ಯ ನಿರ್ವಹಣೆ
ಸಂಚಾರಿ ಆರೋಗ್ಯ ಘಟಕದಲ್ಲಿ ವೈದ್ಯರು, ಶುಶ್ರೂಷಕರು, ಪ್ಯಾರಾಸಿಸ್ಟ್‌, ಲ್ಯಾಬ್‌ ಟೆಕ್ನಿಷಿಯನ್‌, ಕಿರಿಯ ಆರೋಗ್ಯ ಸಹಾಯಕಿ ಇರಲಿದ್ದಾರೆ. ವಾಹನದಲ್ಲಿ ನಾಲ್ಕು ಮಂದಿ ಕುಳಿತು ಸಣ್ಣಪುಟ್ಟ ಚಿಕಿತ್ಸೆ, ನಾನಾ ಪರೀಕ್ಷೆಗಳನ್ನು ನಡೆಸಲು ಅವಕಾಶವಿರಲಿದೆ. ರೋಗಿಗೆ ನಡೆಸಿದ ತಪಾಸಣೆ, ಪರೀಕ್ಷಾ ವರದಿಗಳನ್ನು ಡಿಜಿಟಲ್‌ ವಿಧಾನದಲ್ಲಿ ದಾಖಲಿಸುವ ವ್ಯವಸ್ಥೆ (ಡಿಜಿಟಲ್‌ ಪೇಷೆಂಟ್‌ ರೆಕಾರ್ಡ್‌ ಸಿಸ್ಟಮ್‌) ಒಳಗೊಂಡಿದೆ. ಇದರಿಂದ ಆಗಾಗ್ಗೆ ಆರೋಗ್ಯ ತಪಾಸಣೆ ನಡೆಸುವಾಗ ರೋಗಿಯ ಪೂರ್ವಪರ, ಚಿಕಿತ್ಸಾ ವಿವರ ಗೊತ್ತಾಗಲಿದೆ.

Advertisement

ಜಿಪಿಎಸ್‌ ವ್ಯವಸ್ಥೆ ಹೊಂದಿರುವ ವಾಹನವು ನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಗ್ರಾಮಗಳಿಗೆ ತೆರಳಿ ಬುಡಕಟ್ಟು ಜನರ ಆರೋಗ್ಯ ತಪಾಸಣೆ ನಡೆಸಲಿದೆ. ಜತೆಗೆ ಆರೋಗ್ಯ ಸಂರಕ್ಷಣೆ ಬಗ್ಗೆಯೂ ಜಾಗೃತಿ ಮೂಡಿಸಲಿದೆ. ಆರೋಗ್ಯ ತಪಾಸಣೆ ನಡೆಸಿ ಸ್ಥಳದಲ್ಲೇ ಔಷಧೋಪಚಾರ ನೀಡಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಸಮೀಪದ ಆಸ್ಪತ್ರೆಗೆ ಕಳುಹಿಸಿಕೊಡಲಿದೆ.

ಒಂದು ಘಟಕಕ್ಕೆ ತಲಾ 50 ಲಕ್ಷ ರೂ.ನಂತೆ ಒಟ್ಟು 16 ಸಂಚಾರಿ ಆರೋಗ್ಯ ಘಟಕಕ್ಕೆ 8 ಕೋಟಿ ರೂ. ವೆಚ್ಚವಾಗಲಿದೆ. ಬುಡಕಟ್ಟು ಜನರೊಂದಿಗೆ ಸಂಪರ್ಕವಿಟ್ಟುಕೊಂಡು ಅವರಿಗೆಂದೇ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗೆ ಈ ಘಟಕ ಸೇವೆ ನಿರ್ವಹಣೆ ವಹಿಸಲು ಇಲಾಖೆ ಚಿಂತಿಸಿದೆ.

ಇಂದಿಗೂ ಅರಣ್ಯವನ್ನೇ ಅವಲಂಬಿಸಿರುವ ಬುಡಕಟ್ಟು ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲೇ ಜಾರಿಯಾಗಲಿದೆ. ಅರಣ್ಯ ಅವಲಂಬಿತ ಬುಡಕಟ್ಟು ಜನರು ಹೆಚ್ಚಾಗಿ ನೆಲೆಸಿರುವ ಎಂಟು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಮುಂದೆ ಈ ಘಟಕಗಳ ಮೂಲಕವೇ ಬುಡಕಟ್ಟು ಜನ ನೆಲೆಸಿರುವ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಚಿಂತನೆಯೂ ಇದೆ.
– ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

– ಎಂ.ಕೀರ್ತಿಪ್ರಸಾದ್‌
 

Advertisement

Udayavani is now on Telegram. Click here to join our channel and stay updated with the latest news.

Next