Advertisement

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

10:35 PM Oct 23, 2021 | Team Udayavani |

ಮಹಾನಗರ: ನಗರದ ಎ.ಬಿ. ಶೆಟ್ಟಿ ಸರ್ಕಲ್‌ ಇದ್ದ ಸ್ಥಳದಲ್ಲಿ “ಟ್ರಾಫಿಕ್‌ ಐಲ್ಯಾಂಡ್‌’ ನಿರ್ಮಾಣ ಮಾಡಲು ಉದ್ದೇಶಿಸಿರುವ ಹಿನ್ನೆಲೆ ಯಲ್ಲಿ ಶನಿವಾರದಿಂದ “ಟ್ರಾಫಿಕ್‌ ಐಲ್ಯಾಂಡ್‌’ ಮಾದರಿಯಲ್ಲಿ ಕಲ್ಲುಗಳನ್ನು ಜೋಡಿಸಿ ಅವುಗಳ ನಡುವೆ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

Advertisement

ಇದು ವಾಹನ ಸವಾರರು, ಚಾಲಕರಲ್ಲಿ ಭಾರೀ ಗೊಂದಲ ಸೃಷ್ಟಿಸುವ ಜತೆಗೆ ಜನರ ಅಸಮಾಧಾನಕ್ಕೂ ಕಾರಣವಾಗಿದೆ.ಸರ್ಕಲ್‌ ಅನ್ನು ಈಗಾಗಲೇ ಕೆಡಹಲಾಗಿದ್ದು, ಅಲ್ಲಿ ಸರ್ಕಲ್‌ ಬದಲು ನಾಲ್ಕು “ಟ್ರಾಫಿಕ್‌ ಐಲ್ಯಾಂಡ್‌’ಗಳನ್ನು ನಿರ್ಮಿಸಲು ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಯೋಜನೆ ಹಾಕಿಕೊಂಡಿದೆ. ಟ್ರಾಫಿಕ್‌ ಐಲ್ಯಾಂಡ್‌ಗಳನ್ನು ನಿರ್ಮಿಸುವ ಮೊದಲು ಪ್ರಾಯೋಗಿಕವಾಗಿ ಅದೇ ಮಾದರಿಯಲ್ಲಿ ಕಲ್ಲುಗಳನ್ನು ಜೋಡಿಸಿಡಲಾಗಿದೆ. ಆದರೆ ಇದರಿಂದಾಗಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

ಪಾಂಡೇಶ್ವರ ಕಡೆಯಿಂದ ಬಿಎಸ್‌ಎನ್‌ಎಲ್‌, ಓಲ್ಡ್‌ ಕೆಂಟ್‌ ರಸ್ತೆ ಕಡೆಗೆ ಹೋಗುವವರು ಈ ಹಿಂದಿನಂತೆ ಎ.ಬಿ. ಶೆಟ್ಟಿ ಸರ್ಕಲ್‌ ಮೂಲಕ ಬಲಕ್ಕೆ ಹೋಗಲು ಅವಕಾಶ ನೀಡದೆ ಹ್ಯಾಮಿಲ್ಟನ್‌ ಸರ್ಕಲ್‌, ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌, ಕ್ಲಾಕ್‌ ಟವರ್‌ ಮೂಲಕ ಸುತ್ತಾಗಿ ಬರಲು ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಅನೇಕ ಮಂದಿ ವಾಹನ ಚಾಲಕರು ಶನಿವಾರ ಸಂಚಾರಿ ಪೊಲೀಸರ ಜತೆ ವಾಗ್ವಾದಕ್ಕಿಳಿದರು. ಸರ್ಕಲ್‌ ಇದ್ದ ಪರಿಸರದಲ್ಲಿ ಯಾವ ಕಡೆಯ ವಾಹನ ಯಾವ ಕಡೆಗೆ ಹೋಗುತ್ತಿದೆ ಎಂಬುದರ ಅಂದಾಜು ಸಿಗದೆ ಅನೇಕ ಮಂದಿ ವಾಹನ ಸವಾರರು, ಚಾಲಕರು ವಾಹನಗಳ ನಿಯಂತ್ರಣ ಕಳೆದುಕೊಂಡರು. ಪೊಲೀಸರು ವಾಹನ ಚಾಲಕರನ್ನು ನಿಭಾಯಿಸಲು ಹರಸಾಹಸಪಡುತ್ತಿರುವುದು ಕಂಡು ಬಂದಿದೆ.

ಎರಡು ಅಪಘಾತ
“ಟ್ರಾಫಿಕ್‌ ಐಲ್ಯಾಂಡ್‌’ ನಡುವಿನ ಪ್ರಾಯೋಗಿಕ ಸಂಚಾರ ಆರಂಭವಾದ ಮೊದಲ ದಿನವೇ ಎರಡು ಅಪಘಾತಗಳು ಸಂಭವಿಸಿವೆ. ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಜೋಡಿಸಿಡಲಾಗಿದ್ದ ಕಲ್ಲುಗಳಿಗೆ ಹಾಗೂ ಇತರ ವಾಹನಗಳಿಗೆ ಢಿಕ್ಕಿ ಹೊಡೆಯಿತು. ಇನ್ನೊಂದು ಅಪಘಾತದಲ್ಲಿ ಬೈಕ್‌, ಸ್ಕೂಟರ್‌ಗಳು ಮುಖಾಮುಖೀ ಢಿಕ್ಕಿಯಾದವು.

ಇದನ್ನೂ ಓದಿ:ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

Advertisement

ಎರಡನೇ ಬಾರಿ ಪ್ರಯತ್ನ
“ಕೆಲವು ದಿನಗಳ ಹಿಂದೆ ಇದೇ ರೀತಿ ಕಲ್ಲುಗಳನ್ನು ಜೋಡಿಸಿ ಪ್ರಾಯೋಗಿಕ ಸಂಚಾರ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಅದನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಕಲ್ಲುಗಳನ್ನು ಜೋಡಿಸಿ ಐಲ್ಯಾಂಡ್‌ ಮಾದರಿಯಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದೆ. ಇದು ಇಲ್ಲಿನ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ’ ಎಂದು ಸ್ಥಳೀಯ ಕೆಲವು ರಿಕ್ಷಾ ಚಾಲಕರು ಹೇಳಿದ್ದಾರೆ.

ಹ್ಯಾಮಿಲ್ಟನ್‌
ಸರ್ಕಲ್‌ನಲ್ಲಿಯೂ ಗೊಂದಲ
ಹ್ಯಾಮಿಲ್ಟನ್‌ ಸರ್ಕಲ್‌ನ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಅಲ್ಲಿಯೂ ವಾಹನ ಸವಾರರು, ಚಾಲಕರಲ್ಲಿ ಗೊಂದಲ ಉಂಟಾಗಿದೆ. ಕೆಲವು ವಾಹನಗಳು ಅತೀ ವೇಗದಿಂದ ಸಂಚರಿಸಿ ಏಕಾಏಕಿ ತಿರುವು ತೆಗೆದುಕೊಳ್ಳುತ್ತಿದ್ದು, ಅಪಘಾತ ವಾಗುವ ಆತಂಕ ಮೂಡಿಸಿದೆ ಎಂದು ಕೆಲವು ಮಂದಿ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಗೂ ಸಂಕಷ್ಟ
ಜಿಲ್ಲಾ ಪೊಲೀಸ್‌ ಕಚೇರಿ, ಪೊಲೀಸ್‌ ಆಯುಕ್ತರ ಕಚೇರಿ ಕೂಡ ಎ.ಬಿ. ಶೆಟ್ಟಿ ಸರ್ಕಲ್‌ ಪಕ್ಕದಲ್ಲಿಯೇ ಇದೆ. ಅವರ ವಸತಿಗೃಹಗಳು ಓಲ್ಡ್‌ಕೆಂಟ್‌ ರಸ್ತೆ ಬಳಿ ಇವೆ. ಅವರು ಕೂಡ ಎ.ಬಿ.ಶೆಟ್ಟಿ ಸರ್ಕಲ್‌ ಮೂಲಕ ಬಲಗಡೆಗೆ ಓಲ್ಡ್‌ಕೆಂಟ್‌ ರಸ್ತೆ ಕಡೆಗೆ ಹೋಗಲು ಅವಕಾಶವಿಲ್ಲ. ಹ್ಯಾಮಿಲ್ಟನ್‌ ಸರ್ಕಲ್‌, ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ಮೂಲಕ ಕ್ಲಾಕ್‌ಟವರ್‌ ಆಗಿಯೇ ತೆರಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next