ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರ ಸಿಬ್ಬಂದಿ ಮೊದಲ ಹಂತದಲ್ಲಿ ಸಂಸ್ಥೆಯ ಎರಡು ಮಿನಿ ಬಸ್‌ಗಳನ್ನು ಪೈಲೆಟ್ ಯೋಜನೆಯಡಿ “ಸಂಚಾರಿ ಫೀವರ್ ಕ್ಲಿನಿಕ್’ ಆಗಿ ಅಭಿವೃದ್ಧಿಪಡಿಸಿದ್ದು, ಯಶಸ್ಸಿನ ಹಿನ್ನೆಲೆಯಲ್ಲಿ ಇದೀಗ ಇತರೆ ಜಿಲ್ಲಾಡಳಿತಗಳಿಂದಲೂ ಬೇಡಿಕೆ ಬಂದಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಫೀವರ್ ಕ್ಲಿನಿಕ್‌ಗಳಿಗೆ ಬಂದು ತಪಾಸಣೆ ಮಾಡಿಕೊಳ್ಳುವುದು ಕಷ್ಟ. ಇನ್ನೂ ಕಂಟೈನ್ಮೆಂಟ್ ಪ್ರದೇಶದ ಜನರು ಹೊರಗೆ ಬರುವುದು ಅಸಾಧ್ಯದ ಮಾತು. ಹೀಗಾಗಿ ಧಾರವಾಡ ಜಿಲ್ಲಾಡಳಿತಕ್ಕೆ ನೀಡಿದ್ದ ಸಂಚಾರಿ ಕ್ಲಿನಿಕ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೇಕಾದ ಸ್ಥಳಗಳಿಗೆ ಹೋಗಿ ಅಲ್ಲಿನ ಜನರ ತಪಾಸಣೆಗೆ ನೆರವಾಗುತ್ತಿರುವ ಕಾರಣಕ್ಕೆ ಸಂಸ್ಥೆ ವ್ಯಾಪ್ತಿಯ ಇತರೆ ಜಿಲ್ಲೆಗಳಿಂದಲೂ ಬೇಡಿಕೆ ಬಂದಿವೆ.
ವಿವಿಧ ಜಿಲ್ಲೆಗಳಿಂದ ಬೇಡಿಕೆ: ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಸೋಂಕಿತರ ಪ್ರದೇಶ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳ ಜನರ ಆರೋಗ್ಯ ತಪಾಸಣೆ ಮುಖ್ಯವಾಗಿದೆ. ತಾಲೂಕು ಕೇಂದ್ರಗಳಲ್ಲೂ ಸೋಂಕು ಕಾಣಿಸಿಕೊಂಡಿರುವುದರಿಂದ ಮೊಬೈಲ್ ಕ್ಲಿನಿಕ್‌ನ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಮೂರು ಸಂಚಾರಿ ಫೀವರ್ ಕ್ಲಿನಿಕ್‌ಗಳಿಗೆ ಬೇಡಿಕೆ ಸಲ್ಲಿಸಿದೆ. ಬಾಗಲಕೋಟೆ ಜಿಲ್ಲಾಡಳಿತ ಸದ್ಯ ಒಂದು ಕ್ಲಿನಿಕ್‌ಗೆ ಬೇಡಿಕೆ ಸಲ್ಲಿಸಿದ್ದು, ಅವಶ್ಯಕತೆ ಪರಿಶೀಲಿಸಿ ಇನ್ನಷ್ಟು ಬೇಡಿಕೆ ಸಲ್ಲಿಸುವ ಸಾಧ್ಯತೆಯಿದೆ.
ಸಂಚಾರಿ ದ್ರವ ಸಂಗ್ರಹ ಕೇಂದ್ರ: “ಸಂಚಾರಿ ಗಂಟಲು ದ್ರವ ಸಂಗ್ರಹ ಕೇಂದ್ರ’ ತಯಾರಿಕೆಗೂ ಕಾರ್ಯಾಗಾರ ಸಿಬ್ಬಂದಿ ಮುಂದಾಗಿದ್ದು, ಈಗಾಗಲೇ ಧಾರವಾಡ ಜಿಲ್ಲಾಡಳಿತಕ್ಕೆ ಒಂದು ಕೇಂದ್ರ ಸಿದ್ಧಪಡಿಸಿ ನೀಡಿದ್ದಾರೆ. ಫೀವರ್ ಕ್ಲಿನಿಕ್‌ನಲ್ಲಿರುವಂತಹ ಸೌಲಭ್ಯಗಳು ಇದರಲ್ಲಿದ್ದು, ಬಸ್ಸಿನ ಮುಂದಿನ ಬಾಗಿಲನ್ನು ಗಂಟಲು ದ್ರವ ತೆಗೆಯಲು ಪೆಟ್ಟಿಗೆಯಾಗಿ ಮಾರ್ಪಡಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಇತರೆ ಯಾರೂ ಬಸ್ಸಿನೊಳಗೆ ಸಂಚರಿಸಲು ಅವಕಾಶವಿಲ್ಲ. ಆರಂಭದಲ್ಲಿ ಬೆಳಗಾವಿ ಜಿಲ್ಲಾಡಳಿತ ಮೂರು ದ್ರವ ಸಂಗ್ರಹ ಕೇಂದ್ರ ಸಿದ್ಧಪಡಿಸಲು ಮನವಿ ಮಾಡಿದೆ.
ಆಯಾ ವಿಭಾಗದ ಬಸ್‌ಗಳೇ ಬಳಕೆ: ಬೇಡಿಕೆ ಸಲ್ಲಿಸಿರುವ ಜಿಲ್ಲಾ ವ್ಯಾಪ್ತಿಯ ವಿಭಾಗದ ಬಸ್ ಗಳನ್ನೇ ಇದಕ್ಕೆ ಬಳಕೆ ಮಾಡಲಾಗುತ್ತಿದೆ. ಹತ್ತಿರದ ಡಿಪೋಗಳ ಬಸ್‌ಗಳಲ್ಲಿನ ಸೀಟು ತೆಗೆದು ಖಾಲಿ ವಾಹನವನ್ನು ಇಲ್ಲಿನ ಪ್ರಾದೇಶಿಕ ಕಾರ್ಯಾಗಾರಕ್ಕೆ ಕಳುಹಿಸಲಾಗುತ್ತಿದೆ. ಆರಂಭದಲ್ಲಿ ಸಿದ್ಧಪಡಿಸಿದ ಎರಡು ಬಸ್‌ಗಳ ಮಾದರಿಯನ್ನು ಇತರೆ ನಿಗಮದ ಅಧಿಕಾರಿಗಳು ಪಡೆದಿದ್ದು, ಅಲ್ಲಿಯೂ ಇಂತಹ ಸಂಚಾರಿ ಕ್ಲಿನಿಕ್, ದ್ರವ ಸಂಗ್ರಹ ಘಟಕಗಳನ್ನಾಗಿ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕ ಶ್ರೀನಾಥ ಸೇರಿದಂತೆ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 18-20 ತಾಂತ್ರಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡು ದಿನದಲ್ಲಿ ಒಂದು ಕೇಂದ್ರ ಸಿದ್ಧಪಡಿಸಲಾಗುತ್ತಿದೆ. ಸಂಸ್ಥೆ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಮಾತ್ರ ಕೊವಿಡ್-19 ತಾಂಡವವಾಡುತ್ತಿದ್ದು, ಅಂತಹ ಜಿಲ್ಲೆಗಳಿಂದ ಬೇಡಿಕೆ ಬಂದಿದೆ.
ಸಂಚಾರಿ ಫೀವರ್ ಕ್ಲಿನಿಕ್ ಸದ್ಬಳಕೆಯಾಗುತ್ತಿರುವ ಕಾರಣ ರಾಜ್ಯದ ವಿವಿಧ ಜಿಲ್ಲೆಗೆ ಮಾದರಿ ನೀಡಲಾಗಿದೆ. ಸಂಸ್ಥೆ ವ್ಯಾಪ್ತಿಯ ಜಿಲ್ಲೆಗಳಿಂದ ಬಂದಿರುವ ಬೇಡಿಕೆ ಆಧರಿಸಿ ಸಿದ್ಧಪಡಿಸಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯಿಂದ ಸಂಚಾರಿ ಶೌಚಾಲಯದ ಬೇಡಿಕೆ ಬಂದಿದೆ. ಜಿಲ್ಲಾಡಳಿತಗಳಿಂದ ಬರುವ ಬೇಡಿಕೆ ಆಧರಿಸಿ ಸಿದ್ಧಪಡಿಸಲು ಸಿದ್ಧರಿದ್ದೇವೆ. ಕೊವಿಡ್-19 ವಿರುದ್ಧದ ಹೋರಾಟಕ್ಕೆ ಸಂಸ್ಥೆಯಿಂದ ಬೇಕಾಗುವ ಎಲ್ಲಾ ಸೇವೆ ನೀಡಲು ತಯಾರಿದ್ದೇವೆ.
-ರಾಜೇಂದ್ರ ಚೋಳನ್,ವ್ಯವಸ್ಥಾಪಕ ನಿರ್ದೇಶಕ, ವಾಕರಸಾಸಂ
-ಹೇಮರಡ್ಡಿ ಸೈದಾಪುರ